
`ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರುತ್ತಿದ್ದ “ಪಾಡ್ಡನ”ಗಳ ಇಂಪಾದ ನಿನಾದಗಳು ಯಂತ್ರಗಳ ಶಬ್ಧಕ್ಕೆ ಸೋತು ಹೋಗಿವೆ. ಹಿಂದೆಲ್ಲಾ ಗುತ್ತಿನ ಮನೆಗಳಿಗೆ ಹೋದರೆ ಅಂಗಳದ ತುಂಬಾ ಕಾಣ ಸಿಗುತ್ತಿದ್ದ, ಗೊಬ್ಬರಕ್ಕೆ ಬಳಕೆಯಾಗುತ್ತಿದ್ದಂತಹ ಹುಲ್ಲಿನ ರಾಶಿಗಳು ಇಂದು ಉಪಯೋಗವಾಗುತ್ತಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ. ಉಳುವುದಕ್ಕೆ ಬಳಸುತ್ತಿದ್ದ ಎಮ್ಮೆ,ಕೋಣಗಳಂತಹ ಜಾನುವಾರುಗಳಿಗೆ ಕೂಡಾ ಇದೀಗ ಬೇಡಿಕೆ ಕಡಿಮೆ. ಸಂಗ್ರಹಿಸಲ್ಪಟ್ಟ ಭತ್ತದ ಕಾಳುಗಳನ್ನು ಭದ್ರವಾಗಿಡಲು ಬಳಸುತ್ತಿದ್ದ ಕಲಂಬಿ, ನಾಟಿ ಮಾಡುವ ಸಮಯದಲ್ಲಿ ಮಳೆರಾಯನಿಂದ ರಕ್ಷಣೆ ಪಡೆಯಲು ಧರಿಸುತ್ತಿದ್ದ ಕೊರಂಬು ಕವಚ, ಭತ್ತ ಕುಟ್ಟಲು ಉಪಯೋಗಿಸುತ್ತಿದ್ದ ಉಜ್ಜೇರ್ ಒಣಕೆ ಮುಂತಾದುವುಗಳಿಂದು ಪಳೆಯುಳಿಕೆಗಳಾಗಿ ಪರಿಗಣಿಸಲ್ಪಟ್ಟು ವಸ್ತು ಸಂಗ್ರಹಾಲಯ ಸೇರಿವೆ. ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ನಮ್ಮ ನಾಡು ಯಾಂತ್ರಿಕತೆಯ ಪ್ರಭಾವಕ್ಕೆ ಸೊರಗಿ ಹೊಗಿದೆ.ಉಸಿರಾಡಲು ಶುದ್ಧ ಪ್ರಾಣವಾಯುವಿಗೂ ಬೆಲೆ ತೆರಬೇಕಾದ ಪರಿಸ್ಥಿತಿ ಬಂದಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮಲ್ಲಿನ ಹಳೆಯ ರೀತಿಯ ಕೃಷಿ ವಿಧಾನವನ್ನು ಅನುಸರಿಸಿ ಮಾತ್ರ ವ್ಯವಸಾಯ ಮಾಡಬೇಕೆಂದಲ್ಲ. ಬೇಸಾಯದ ಪ್ರಗತಿಯಲ್ಲಿ ತಾಂತ್ರಿಕತೆಯ ಪಾಲು ಬಹುಮಟ್ಟದಲ್ಲೇ ಇದೆ.ವ್ಯವಸಾಯದ ಶೀಘ್ರ ಬೆಳವಣಿಗೆಯಲ್ಲೂ ನೂತನ ತಂತ್ರಜ್ಞಾನಗಳು ಮುಖ್ಯವೆನಿಸುತ್ತವೆ. ದಿನಗಳಟ್ಟಲೆ ಮೈಮುರಿದು ಮಾಡಬೇಕಿದ್ದ ಕೆಲಸ ಕಾರ್ಯಗಳು ಇಂದು ತಾಸುಗಳಲ್ಲಿ ಮುಗಿಯುತ್ತವೆ.ಇದರಿಂದ ಸಮಯ ವ್ಯರ್ಥವಾಗುವುದನ್ನು ಇಲ್ಲವಾಗಿಸಬಹುದಲ್ಲದೆ, ಸಮಯಕ್ಕೆ ಸರಿಯಾಗಿ ಸರಕುಗಳನ್ನು ಮಾರುಕಟ್ಟೆಗೆ ತಲುಪಿಸಲೂ ಸಹಕಾರಿಯಾಗುತ್ತದೆ.ಹೀಗೇ ಬೇಸಾಯದ ಪ್ರತಿಯೊಂದು ಹಂತಗಳಲ್ಲೂ ತಂತ್ರಜ್ಞಾನದ ಕೊಡುಗೆಯನ್ನು ಎಂದಿಗೂ ಅಲ್ಲಗಳೆಯಲಾಗದು. ಆದರೂ ನಮ್ಮ ತಲೆಮಾರಿಗೆ ಪರಂಪರಾಗತ ಕೃಷಿ ಉಪಕರಣಗಳ ಬಗ್ಗೆ ಸಾಮಾನ್ಯ ಜ್ಞಾನ ಕೂಡಾ ಇಲ್ಲವೆಂಬುದು ಬಹಳ ಖೇದಕರ ಸಂಗತಿ.ಬೇಸಾಯವನ್ನು ಕುಲಕಸುಬನ್ನಾಗಿ ಮಾಡಿಕೊಂಡಿದ್ದ ನಮ್ಮ ಪೂರ್ವಿಕರ ಕೃಷಿ ವಿಧಾನವನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ನಾವು ಮುಂದೆ ಬರಬೇಕಿದೆ.
ಕಾಮೆಂಟ್‌ಗಳು