
"ಸರ್,ಇದು ಕ್ಲೋಸಿಂಗ್ ಟೈಮ್.."
ಹರಿದಾಸನು ತಲೆಯೆತ್ತಿ ನೋಡಿದ.ಬಾರಿನ ಸಪ್ಲಾಯರ್ ಹುಡುಗನು ಅವನ ಮುಂದೆ ಅಕ್ಷಮ್ಯ ಮುಖಭಾವದಿ ನಿಂತಿದ್ದ .ಸಮಯ 9:30 ಆಗಿತ್ತು.ಹರಿದಾಸ ಸುತ್ತಲೂ ಒಮ್ಮೆ ಕಣ್ಣೋಡಿಸಿದ.ಬಾರಿನಲ್ಲಿ ತಾನು ಮಾತ್ರ.ಉಳಿದ ಕುಡುಕರೆಲ್ಲರೂ ಗೂಡು ಸೇರಿಯಾಗಿದೆ.ಅವನು ಮೆಲ್ಲಗೆ ಎದ್ದೇಳಲು ಪ್ರಯತ್ನಿಸಿದ.
"ನನಗೊಂದು ಬಾಟ್ಲಿ ವಿಸ್ಕಿ ಬೇಕಪ್ಪಾ" ಹರಿ ಹೇಳಿದ.
ಸಪ್ಲಾಯರ್ ನ ಮುಖ ಬಾಡಿತು.
"ಸರ್,ಈವಾಗ್ಲೇ ಹೆಚ್ಚಾಗಿದೆ. ಇನ್ನೂ.."!?
"ನೀನು ಬೇಸರ ಮಾಡ್ಕೋಬೇಡ.ನಾನು ಮನೆಗೆ ಹೋಗಿ ಕುಡಿಯುತ್ತೇನೆಂದ ಹರಿ.
ಸಪ್ಲಾಯರ್ ಬಾಟ್ಲಿ ತಂದು ಕೊಟ್ಟ.ಜೇಬಲ್ಲಿದ್ದ ಹಣವನ್ನು ಅವನ ಕೈಗಿತ್ತು ಹರಿದಾಸ್ ಬಾರಿನಿಂದ ಹೊರಗಿಳಿದ.ಮದ್ಯದ ನಶೆಯಲ್ಲಿ ಅವನ ಕಾಲುಗಳು ನಡುಗತೊಡಗಿದ್ದವು.ಬಾರಿನ ಹೊರಗಡೆ ಹರಿದಾಸನ ಬಾಲ್ಯ ಸ್ನೇಹಿತ ಬಾಲಚಂದ್ರನು ಅವನಿಗಾಗಿ ಕಾಯುತ್ತಿದ್ದ.ಅಂದಹಾಗೆ ಬಾಲಚಂದ್ರನು ಒಬ್ಬ ಗೈನಕಾಲಜಿಸ್ಟ್ ಆಗಿದ್ದನು.ಬಾಲನೊಂದಿಗೆ ಹರಿಯ ಸಹಾಯಕನಾಗಿದ್ದ ಬಿಬಿನ್ ಎನ್ನುವ ಯುವಕನೂ ಜೊತೆಗಿದ್ದ.
ಹಲೋ..ಬಾಲಚಂದ್ರ ನಿನಗೆ ಇಲ್ಲೇನ್ ಕೆಲ್ಸ..?
"ಮನೆಗೆ ಹೋದಾಗ ನೀನಿರಲಿಲ್ಲ.ಆಗ ಬಿಬಿನ್ ಹೇಳಿದ ಇಲ್ಲೇ ಇರಬಹುದು ಎಂದು.."
ಹರಿದಾಸನು ಬಿಬಿನ್ ನನ್ನು ಒಮ್ಮೆ ದುರುಗುಟ್ಟಿ ನೋಡಿದ.ಬಾಲಚಂದ್ರನು ಕಾರಿನ ಬಾಗಿಲು ತೆರೆದ. ಹರಿ ಅವನೊಂದಿಗೆ ಹೋಗಿ ಮುಂದಿನ ಸೀಟಿನಲ್ಲಿ ಕುಳಿತನು.
"ಅಲ್ವೋ ನಿನಗೇನಾಗಿದೆ ಇವಾಗ ಈ ರೀತಿ ಕುಡಿಯೋದಕ್ಕೆ..ಎರಡು ವರ್ಷಗಳ ಹಿಂದೆ ಕುಡಿಯೋದನ್ನ ಬಿಟ್ಟಿದ್ದ ನಿನಗೆ ಅಷ್ಟಕ್ಕೂ ಅದೇನಾಗಿದೆ ಹೇಳೋ"!!
"ಇಲ್ಲಿ ನಡೆದಿದ್ದೆಲ್ಲಾ ನೀ ತಿಳಿದಿಲ್ವಾ..? ಸುಳ್ಳಾಡಬೇಡ.ಎರಡು ದಿನದಿಂದ ನಾನೇ ಅಲ್ವ ಕಣೋ ಇಲ್ಲಿನ ಸೂಪರ್ ಸ್ಟಾರ್.. "
'ಕಾಲೇಜು ವಿಧ್ಯಾರ್ಥಿನಿಯ ಫೋಟೋಗಳನ್ನು ಮೋರ್ಫ್ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಅವಮಾನಿಸಿದ ಫೋಟೊಗ್ರಾಫರ್ ಅರೆಸ್ಟ್.ವಾರ್ತೆ ನೀನೂ ನೋಡಿದ್ಯಲ್ವಾ..?"
ಹರಿದಾಸ್ ನಗು ಬೀರಿದ.ನೋವನ್ನು ಕಚ್ಚಿ ಹಿಡಿದ ಒಂದು ಕಿರು ನಗು.
ಅದು ಸುಳ್ಳೆಂದು ನಮಗೆ ಖಾತರಿಯಲ್ಲವೇ..ಮತ್ತೇಕೆ ನೀ ದುಃಖಿಸೋದು..?
"ಹೌದು ಬಾಲ.ಆ ವಾರ್ತೆ ಸುಳ್ಳು ಎಂಬುದು ಸ್ಪಷ್ಟ.ಅವರು ಹೇಳುತ್ತಿರುವಂತಹ ಮಗುವನ್ನ ನಾನಿದುವರೆಗೂ ಕಣ್ಣಾರೆ ಕಂಡಿಲ್ಲ.ನಿನಗೆ ನನ್ಮೇಲೆ ನಂಬಿಕೆ ಇದೆ ಅನ್ನೋವಾಗ ಸಂತೋಷವಾಗ್ತಿದೆ.ಆದ್ರೆ ನನ್ನ ಜೀವನದ ಒಲುಮೆಯ ಸಂಗಾತಿಯಾಗಿ ನಾನು ಆರಿಸಿದ ನನ್ನ ಒಡತಿಗೆ ನನ್ನ ಮೇಲಿರುವ ನಂಬಿಕೆ ಕಳೆದು ಹೋಗಿದೆ..
'ನೀರಜಾ ಅವಳು ಏನಂದ್ಲು"?
ಏನು ಹೇಳಿಲ್ಲ.ಈ ಘಟನೆ ನಡೆದು ಇವತ್ತಿಗೆ ಮೂರು ದಿನಗಳು ಕಳೆದವು.
ಈ ನಿಮಿಷದ ವರೆಗೂ ಅವಳು ನನ್ನೊಂದಿಗೆ ಮಾತನಾಡಿಲ್ಲ.ಅವಳ ಮೌನಕ್ಕೆ ನಾನು ಪದೇ ಪದೇ ಬಳಲುತ್ತಿದ್ದೇನೆ.ನೋವನ್ನು ಸಹಿಸಲು ಅಸಾಧ್ಯವೆಂದೆನಿಸಿದಾಗ ಹಿಂದಿನಂತೆಯೇ ಕುಡಿಯೋದಕ್ಮೆ ಆರಂಭಿಸಿದೆ."
"ನೀನು ಬೇಸರ ಪಡದಿರು.ನೀರಜಾಳೊಂದಿಗೆ ನಾನು ಮಾತಾಡುವೆನು.ಅವಳಿಗೆ ಇದನ್ನೆಲ್ಲಾ ಕೇಳಿ ಗಾಬರಿಯಾಗಿರಬಹುದು.ದಿನಕಳೆದಂತೆ ಎಲ್ಲಾ ಸರಿ ಹೋಗತ್ತೆ.ನೀ ಆ ಬಗ್ಗೆ ಚಿಂತಿಸದಿರು"
ಬಾಲಚಂದ್ರ ಸ್ನೇಹಿತನನ್ನ ಸಮಾಧಾನಪಡಿಸಿದ.ಅವರ ಕಾರು ಮನೆಯಂಗಣದ ಪೋರ್ಚ್ ನಲ್ಲಿ ಬಂದು ನಿಂತಿತು.ಕಾರಿನ ಬಾಗಿಲು ತೆರೆದು ಇಬ್ಬರೂ ಹರಿಗೆ ಹೆಗಲು ಕೊಟ್ಟು ಮುಂದೆ ನಡೆಸಿದರು.ಬಾಲಚಂದ್ರ ಬೆಲ್ ಒತ್ತಿದ.ನೀರಜಾ ಬಾಗಿಲು ತೆರೆದಳು.ಬಾಲಚಂದ್ರ ಹರಿಯನ್ನು ಬೆಡ್ ರೂಮ್ ನಲ್ಲಿ ಮಲಗಿಸಿದ ನಂತರ ನೀರಜಾಳ ಬಳಿ ಬಂದು "ಅವನು ಸ್ವಲ್ಪ ಕುಡಿದಿದ್ದಾನೆ.ನೀನೇನು ಅವನೊಡನೆ ರಂಪಾಟ ಮಾಡ್ಬೇಡ.ಅವನಿಗದು ಸಹಿಸೋಕೆ ಆಗಲ್ಲ.ಅಷ್ಟಕ್ಕೂ ನೀನಂದ್ರೆ ಅವನಿಗೆ ಬಲು ಪ್ರೀತಿ"ಎಂದಾಗ
"ಹುಂ...ಪ್ರೀತಿ.. ನೀವು ಗಂಡಸರಿಗೆ ಏನಾದ್ರೂ ಬೇಜಾರಾದ್ರೆ ಅದನ್ನು ಅಳಿಸೋದಕ್ಕಿರುವ ಸೂತ್ರಧಾರ ಈ ಮದ್ಯಪಾನ. ಹಾಗಾದರೆ ನಾವು ಮಹಿಳೆಯರು ಏನನ್ನಬೇಕು?ನನ್ನ ಕುಟುಂಬವನ್ನೇ ತೊರೆದು ಹರಿಯೊಡನೆ ಹಸೆಮಣೆಯೇರಿದವಳು ನಾನು.ಅಂತಹ ಯೋಚನೆ ಇದ್ದಿದ್ದರೆ ಇಂತಹ ಒಂದು ನೀಚ ಕಾರ್ಯವನ್ನು ಮಾಡೋದಾದ್ರೂ ಹೇಗೆ?
ಬಾಲಚಂದ್ರ ದನಿ ಎತ್ತಲಿಲ್ಲ.
" ಇವಾಗ ನನಗೊಂದು ದೂರವಾಣಿ ಕರೆ ಬಂದಿತ್ತು.ಆ ಹುಡುಗಿ..ಅವಳು ನರಗಳನ್ನು ಕೊಯ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಳಂತೆ.ಈಗ ಆಸ್ಪತ್ರೆಗೆ ಸೇರಿಸಿದ್ದಾರೆ.ಈ ಹುಡುಗಿಯನ್ನು ಹರಿ ಮದುವೆಯಾಗಬೇಕು ಎಂಬುದು ಅವರು ಸೂಚಿಸುವ ಪರಿಹಾರ ಮಾರ್ಗ.ಇಷ್ಟೆಲ್ಲಾ ಅವಾಂತರಗಳಾಗಿಯೂ ಸಹಿಸಿಕೊಂಡು ನಿಲ್ಲೋಕೆ ನನ್ನಿಂದಾಗಲ್ಲ.ಬೆಳಗ್ಗೆ ತಂದೆಯವರು ಬರುತ್ತಾರೆ. ನಾಳೆ ನಾನು ನನ್ನ ಮನೆಗೆ ಹೋಗಲು ತೀರ್ಮಾನಿಸಿಯಾಗಿದೆ.ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದಳು.
ಬಾಲಚಂದ್ರ ಮಾತಾಡಲಿಲ್ಲ.
"ಹೌದು ನೀರಜಾ..ನೀ ಮಾಡ್ತಿರೋದು ಸರಿ.ನಾನು ಮಾಡಿದ ಕೃತ್ಯಕ್ಕೆ ಇದಕ್ಕಿಂತಲೂ ದೊಡ್ಡ ಶಿಕ್ಷೆಯಾಗಬೇಕಿದೆ."
ನೀರಜಾ ಬೆಚ್ಚಿಬಿದ್ದಳು.ಹರಿದಾಸನ ಶಬ್ದವದು. ಅವರ ಸಂಭಾಷಣೆಗೆ ಕಿವಿಯಾಗಿ ಕೋಣೆಯ ಬಾಗಿಲ ಬಳಿ ನಿಂತಿದ್ದ ಆತ.
ಮರುದಿನ ಬೆಳಗ್ಗೆ ನೀರಜಾಳ ತಂದೆ ಶಂಕರ್ ಮನೆ ತಲುಪಿದರು.ಅವರು ಊರಿನ ಪ್ರಮುಖರಲ್ಲೊಬ್ಬರು.ನೀರಜ ತನ್ನ ಗಂಟು ಮೂಟೆ ಹೊತ್ತು ಹೊರಡಲನುವಾದಾಗ ಬಾಲಚಂದ್ರ ಮತ್ತು ಬಿಬಿನ್ ಅಲ್ಲಿಗೆ ಬಂದರು.ಹರಿದಾಸ್ ಇವೆಲ್ಲವನ್ನೂ ಕುರ್ಚಿಯಲ್ಲಿ ಕುಳಿತು ಒಬ್ಬ ಮೂಕ ಪ್ರೇಕ್ಷಕನಾಗಿ ವೀಕ್ಷಿಸುತ್ತಿದ್ದಾನೆ.
"ಹಾ..ಸ್ನೇಹಿತರು ಬಂದ್ಬಿಟ್ರಲ್ವಾ.ನಾನು ಮತ್ತು ನನ್ನ ಮಗಳು ಇಲ್ಲಿಂದ ಹೊರಡುತ್ತಿದ್ದೇವೆ.ಇನ್ನು ನಿಮಗೆ ನಿಮ್ಮಿಷ್ಟದಂತೆ ನಡೆದುಕೊಳ್ಳಿ"
ಅಷ್ಟರಲ್ಲೇ ಶರ್ಮಾ ವಕೀಲರು ಅಲ್ಲಿಗೆ ತಲುಪಿದರು.ಅವರು ಶಂಕರ ರ ಹತ್ತಿರದ ಸ್ನೇಹಿತ ಹಾಗೂ ಕುಟುಂಬ ವಕೀಲರು.
'ವಕೀಲ್ರು ಸರಿಯಾದ ಸಮಯಕ್ಕೇ ಬಂದ್ಬಿಟ್ಟಿದ್ದೀರಿ..'
" ಶಂಕರರೇ.. ಅಲ್ಲದಿದ್ದರೂ ನಾವು ವಕೀಲರು ಯಾವತ್ತೂ ತಡವಾಗೋದಿಲ್ಲಲ್ವೇ...
ಅವರಿಬ್ಬರೂ ನಕ್ಕರು.
ವಕೀಲರು ಒಂದು ಕಾಗದವನ್ನ ಹೊರ ತೆಗೆದು ಶಂಕರರ ಕೈಗಿತ್ತರು.ಅವರು ಅದನ್ನು ಹಿಡಿದು ಹರಿಯ ಕಡೆಗೆ ತಿರುಗಿದರು.
"ಮಗಳು ನನ್ನೊಂದಿಗೆ ಎಲ್ಲವನ್ನೂ ಹೇಳಿದ್ದಾಳೆ.ಏನಿದ್ದರೂ ನೀನಂತೂ ಈಗ ಬೇರೊಂದು ಮದುವೆಯ ವಿಚಾರದಲ್ಲಿದ್ದೀಯ.ಆಗ ಇವಳು ನಿನಗೊಂದು ಭಾರವೆನಿಸಬಹುದು.ಆದ್ದರಿಂದ ಎಲ್ಲರೂ ಕ್ರಮ ಪ್ರಕಾರ ಸುಸೂತ್ರವಾಗಿ ನಡೆಯಲಿ.ಈ ವಿಚ್ಚೇದನಾ ಅರ್ಜಿಯಲ್ಲಿ ನೀನೊಂದು ರುಜು ಹಾಕಿ ಕೊಟ್ಟರೆ ಸಾಕು.ಮಿಕ್ಕಿದ್ದೆಲ್ಲವನ್ನು ನಾನು ನೋಡಿಕೊಳ್ಳುತ್ತೇನೆ"
ತಂದೆಯ ಮಾತುಗಳು ನೀರಜಾಳಿಗೆ ಅಚ್ಚರಿಯಾಯಿತು.ಇಲ್ಲಿಯವರೆಗೂ ತಲುಪುತ್ತೆ ಅಂತ ಅವಳು ಭಾವಿಸಿರಲಿಲ್ಲ.
"ಇನ್ನೊಂದು ಬಾರಿ ಆಲೋಚಿಸಿ ನಿರ್ಧಾರ ಕೈಗೊಂಡರೆ ಸಾಕಾಗದೇ...ಸ್ವಂತ ಮಗಳ ಭವಿಷ್ಯದ ವಿಷಯವಲ್ಲವೇ..ಯಾಕೆ ಈ ಅವಸರ?
ಬಾಲಚಂದ್ರನು ಕೇಳಿದ.
" ಹಲೋ ಡಾಕ್ಟರೇ ಒಂದಲ್ಲ ಸಾವಿರ ಬಾರಿ ಆಲೋಚಿಸಿಯೇ ಈ ತೀರ್ಮಾನಕ್ಕೆ ಬಂದಿದ್ದೇನೆ. ಇದು ಅಲ್ಪ ಮುನ್ನವೇ ಬೇಕಿತ್ತು.ನನ್ನ ಮಗಳಿಗೆ ಒಂದು ಕರುಳ ಕುಡಿಯನ್ನೂ ಕೊಡಲಾಗದವನಲ್ಲವೇ ಈತ.ಅದು ತಿಳಿದ ಆ ದಿನಾನೇ ಈ ಸಂಬಂಧವ ತೊರೆಯಲು ನಾನಿವಳೊಂದಿಗೆ ಹೇಳಿದ್ದೆ.ಆಗ ಅವಳಿಗೆ ನನ್ನ ಮಾತಿಗಿಂತ ಮಿಗಿಲು ಹರಿದಾಸನ ಪ್ರೇಮವಾಗಿತ್ತು.ಈವಾಗ ಅದೇನಾಯ್ತು..?
ಕ್ಷಣಾರ್ಧದಲ್ಲೇ ಡಾ.ಬಾಲಚಂದ್ರನ್ ರವರ ಕೋಪ ನೆತ್ತಿಗೇರಿತ್ತು.
"ನಿಲ್ಲಿಸಿ ಮಿಸ್ಟರ್.ನಿಮಗೇನು ಗೊತ್ತಿದೆ ಅಂತ ಆಗಿನಿಂದ ಬೊಬ್ಬೆ ಹಾಕ್ತಿರೋದು..ಈ ನಿಂತಿರುವ ಹರಿದಾಸನಂತಹ ಒಬ್ಬ ಈ ಜನ್ಮದಲ್ಲಿ ನಿಮ್ಮ ಮಗಳಿಗೆ ಸಿಕ್ಕ ಮಹಾ ಭಾಗ್ಯವದು."
"ಬಾಲಚಂದ್ರ ಬೇಡ.."ಹರಿದಾಸನು ಸ್ನೇಹಿತನನ್ನು ತಡೆಯಲು ಯತ್ನಿಸಿದ.
"ಬೇಕು.ಇಲ್ಲದಿದ್ದರೆ ಮತ್ತೆ ಇನ್ನೂ ಇವರು ನಿನ್ನ ಹೃದಯಕ್ಕೆ ನೋವುಣಿಸುವರು.ಎಲ್ಲರೂ ಆಶ್ಚರ್ಯ ಚಕಿತರಾಗಿ ನೋಡುತ್ತಿದ್ದಂತೆಯೇ ಬಾಲಚಂದ್ರನ್ ಮುಂದುವರೆಸಿದರು.
'ನಾನು ಬರಿ ಹರಿದಾಸನ ಸ್ನೇಹಿತ ಮಾತ್ರವಲ್ಲ ಇವರಿಗೆ ಚಿಕಿತ್ಸೆ ನೀಡಿದ ಡಾಕ್ಟರ್ ಕೂಡಾ. ನೀವು ಎನಿಸಿದಂತೆ ಇವರಿಗೆ ಮಕ್ಕಳ ಭಾಗ್ಯವಿಲ್ಲದಿರುವುದು ಹರಿದಾಸನ ಸಮಸ್ಯೆಯಿಂದಲ್ಲ.ತೊಂದರೆ ಇರೋದು ನಿಮ್ಮ ಮಗಳಿಗೇನೆ.ನೀರಜಾ ಯಾವತ್ತೂ ತಾಯಿಯಾಗಲ್ಲ.ಅಂತಹ ಭಾಗ್ಯವನ್ನು ದೇವನವಳಿಗೆ ಕರುಣಿಸಿಲ್ಲ'.
ನೀರಜಾಳ ಕೈಗಳಿಂದ ಪೆಟ್ಟಿಗೆ ಕೆಳಕ್ಕುರುಳಿತು.
ಸಮಸ್ಯೆ ನೀರಜಾಳಿಗೆ ಎಂದರಿತರೆ ಅವಳೇನಾದರೂ ನನ್ನನು ಬಿಟ್ಟು ಹೋಗುವಳೋ ,ಇನ್ನೊಂದು ವಿವಾಹಕ್ಕೆ ಅನುವಾಗುವಳೋ ಎಂಬ ಭಯದಿಂದಾಗಿ ಅವನು ನಿಮ್ಮೊಂದಿಗೆ ಸುಳ್ಳು ಹೇಳಿರುವುದು."
ಡಾಕ್ಟರ್ ನೇರವಾಗಿ ಶಂಕರರ ಬಳಿ ಬಂದು ಡೈವೋರ್ಸ್ ಪೇಪರನ್ನ ತೆಗೆದು ಸ್ನೇಹಿತನ ಹತ್ತಿರ ಹೋದರು.
"ಹರಿ ನಿನ್ನನ್ನು ತಿಳಿಯುವ ಇಚ್ಛಾಶಕ್ತಿ ಇಲ್ಲದವರನ್ನು ಬಿಟ್ಟು ಬಿಡು.ನೀ ಇದರಲ್ಲಿ ಸಹಿ ಹಾಕಿ ಕೊಡು.ಅವರೇನಾದ್ರೂ ಮಾಡಲಿ.ನಿನ್ನ ಸ್ನೇಹವ ಅನುಭವಿಸಲು ಅವರಿಗೆ ಭಾಗ್ಯವಿಲ್ಲ ಕಣೋ"
ಹರಿದಾಸ್ ನಡುಗುವ ಕೈಗಳೊಂದಿಗೆ ಪೆನ್ ತೆಗೆದಾಗ,ಮುಂದಿನ ಕ್ಷಣ ನಿಂತಲ್ಲೇ ನಾನಿಲ್ಲದೇ ಇರುತ್ತಿದ್ದರೆ ಎಂದು ನೀರಜಾಳಿಗೆ ತೋಚಿತು.ಹರಿದಾಸ್ ಇನ್ನೇನು ಸಹಿ ಹಾಕಲು ಹೊರಡುತ್ತಿದ್ದಂತೆಯೇ ನಿಮಿಷಾರ್ಧದಲ್ಲಿ ಎಲ್ಲರೂ ಸ್ಥಂಭೀಭೂತರಾಗುವಂತೆ ಬಿಬಿನ್ ಹರಿದಾಸನ ಕಾಲಿಗೆ ಬಿದ್ದು "ಹರಿದಾಸ ನನ್ನೊಂದಿಗೆ ಕ್ಷಮಿಸಬೇಕು..ಆ ಫೋಟೋ ಅದು.. ಅದನ್ನು ಮೋರ್ಫ್ ಮಾಡಿರೋದು ನಾನು"
ಹರಿದಾಸ್ ಕುರ್ಚಿಯಿಂದ ಮೇಲೆದ್ದ.
"ಆ ಹುಡುಗಿ ನಮ್ಮ ಸ್ಟುಡಿಯೋ ಗೆ ಎರಡು ಬಾರಿ ಫೋಟೋ ತೆಗೆಯಲು ಬಂದಿದ್ದಳು.ಆದರೆ ಅವತ್ತು ನೀವು ಅಲ್ಲಿರಲಿಲ್ಲ.ಒಂದಿನ ಆ ಹುಡುಗಿ ಯೊಂದಿಗೆ ನನ್ನ ಮನದಾಳದ ಬಯಕೆಯನ್ನು ಹೇಳಿ ಮದುವೆಯ ಬಗ್ಗೆ ವಿಚಾರಿಸಿದ್ದೆ.ನಿನ್ನಂತಹ ಒಬ್ಬ ಕರಿಯನು ನನಗೆ ಬೇಡ ಅಂದಿದ್ದಳು.ಆ ಕೋಪದಿಂದಲೇ ನಾನು ಆ..ಆದರೆ ,ಅದು ಇಷ್ಟು ವೈರಲಾಗುತ್ತೆ ಅಂತ ಚಿಂತಿಸಿಲ್ಲ"
ನಿನ್ನನ್ನು ನಾನು ಓರ್ವ ಕೂಲಿಗಾರನಾಗಿಯಲ್ಲ ನನ್ನ ತಮ್ಮನ ಹಾಗೆ ನೋಡಿರೋದು.ಹಾಗಿದ್ದೂ ನೀನು..."
ಇಷ್ಟು ಹೇಳಿ ಹರಿ ಅವನ ಕೆನ್ನೆಗೆ ಎರಡು ಬಾರಿಸಿದನು.ತುಸು ಹೊತ್ತಲ್ಲೇ ಪೋಲಿಸ್ ಅಲ್ಲಿಗೆ ತಲುಪಿದರು.ಬಿಬಿನ್ ಅವರ ಮುಂದೆ ತಪ್ಪುಗಳನ್ನು ಒಪ್ಪಿಕೊಂಡನು.
"ನಿನ್ನ ಒಂದು ನಿಮಿಷ ದ ರಾಧ್ದಾಂತವು ಎಷ್ಟು ಜೀವನಗಳ ಮೇಲೆ ಬಾಧಿಸಿತು ಗೊತ್ತೇನು??
ಎಸ್.ಐ ರಾಜಶೇಖರ ಬಿಬಿನ್ ನೊಂದಿಗೆ ಕೇಳಿದರು.ನಂತರ ಹರಿಯ ಕಡೆಗೆ ತಿರುಗಿ " ಸಾರಿ ಮಿಸ್ಟರ್ ಹರಿದಾಸ್.. ಇದುವರೆಗೂ ತಮಗುಂಟಾದ ಎಲ್ಲಾ ತೊಂದರೆಗಳಿಗೂ ನಾನು ಕ್ಷಮೆ ಕೋರುತ್ತಿದ್ದೇನೆ.ಇನ್ನು ಇವನ ವಿಷಯವನ್ನು ನಾವು ನೋಡಿಕೊಳ್ಳುತ್ತೇವೆ.ಆಸ್ಪತ್ರೆಗೆ ಹೋಗಿ ಆ ಹುಡುಗಿಯ ಪೋಷಕರಿಗೆ ಎಲ್ಲಾ ವಾಸ್ತವಾಂಶಗಳನ್ನು ನಾನೇ ತಿಳಿಸುತ್ತೇನೆ."
ಎಸ್.ಐ ಭರವಸೆ ನೀಡಿದರು. ಪೋಲೀಸರು ಮನೆ ಬಿಟ್ಟು ಹೋದಾಗ ನೀರಜಾ ಹರಿದಾಸನ ಸನಿಹ ಬಂದಳು.ಅಲ್ಪ ಸಮಯ ಅವರು ನಿಶ್ಯಬ್ದರಾಗಿ ಪರಸ್ಪರ ನೋಡುತ್ತಾ ನಿಂತರು.ನಂತರ ತುಂಬಿದ ನೇತ್ರಗಳೊಂದಿಗೆ ಅವಳು ಗಂಡನ ಎದೆಗೆ ಒರಗಿ ತಬ್ಬಿಕೊಂಡಳು..ಕಠಿಣ ಹೃದಯದವರಾದ ಶಂಕರ್ ರವರ ಒದ್ದೆಯಾದ ನಯನಗಳಿಂದ ಹನಿಗಳು ಜಾರಿದವು...
- ಅನ್ಸಾರಿ
ಕಾಮೆಂಟ್‌ಗಳು