
ಹತ್ತೊಂಬತ್ತನೆಯ ಶತಮಾನದಲ್ಲಿ ಉದಯಿಸಿದ ಮಹಿಳಾ ವಿಮೋಚನೆಯ ಸಿದ್ಧಾಂತವು ಜಾಗತಿಕ ಮಟ್ಟದಲ್ಲಿ ಇಂದಿಗೂ ಚರ್ಚೆಗೊಳಗಾಗುತ್ತಲೇ ಇದೆ.ಫೆಮಿನಿಸಂ ಎನ್ನುವುದು ಸ್ತ್ರೀ ಸಮಾನತೆಯ ಹಕ್ಕುಗಳು ಮತ್ತು ನಿಯಮಗಳ ಸಂರಕ್ಷಣೆಯನ್ನು ಲಕ್ಷವಿರಿಸುವ ಒಂದು ಮುನ್ನಡೆಯಾಗಿದೆ.ಇದರ ಪ್ರಚಾರಕರ ಕರ್ತವ್ಯಪರವೂ,ಸಾಮಾಜಿಕವೂ,ಭೂಶಾಸ್ತ್ರಪರವೂ ಆದ ವಿಂಗಡನೆಯಿಂದಾಗಿ ಇದು ವಿಭಿನ್ನವಾಗಿ ವಿಶ್ಲೇಷಿಸಲ್ಪಡುತ್ತದೆ.ಅಂದರೆ ಮಹಿಳಾವಾದದ ಚಿಂತನಾ ಪದ್ಧತಿಯೂ ಪ್ರಾಯೋಗಿಕ ರೀತಿನೀತಿಗಳೂ ಎಲ್ಲಾ ಕಡೆ ಒಂದೇ ರೀತಿಯಾಗಿರಲಿಲ್ಲ.ಸಾಮಾನ್ಯವಾಗಿ ಎಲ್ಲಾ ಸಾಮಾಜಿಕ ಮುನ್ನಡೆಗಳ ಹುಟ್ಟು ಮತ್ತು ಪರಿಣಾಮದ ಕುರಿತು ಸಹಜವಾಗಿ ಪ್ರಶ್ನೆಗಳು ಉದ್ಭವಿಸುವಂತೆಯೇ ಫೆಮಿನಿಸಂ ಕೂಡಾ ಇಂದು ವ್ಯಾಪಕವಾಗಿ ವಿಮರ್ಶಿಸಲ್ಪಡುತ್ತದೆ.ಸ್ತ್ರೀವಿಮೋಚನೆಯನ್ನು ಪಾಶ್ಚಾತ್ಯ ರೀತಿಶಾಸ್ತ್ರಗಳಿಗನುಗುಣವಾಗಿ ತುಲನೆಗೈದು ಚಿಂತಿಸುವವರ ಸಂಖ್ಯೆಯು ದೈನಂದಿನ ಹೆಚ್ಚಾಗುತ್ತಿದೆ.
ಸ್ತ್ರೀವಾದದ ಮೂರು ತರಂಗಗಳು;
ಸ್ತ್ರೀವಾದದ ಇತಿಹಾಸವನ್ನು ಮೂರು ತರಂಗಗಳಾಗಿ ವಿಭಾಗಿಸಬಹುದು.ಈ ಮೂರೂ ತರಂಗಗಳು ಒಂದೇ ಆಶಯದ ವಿವಿಧ ಆಯಾಮಗಳನ್ನು ಸ್ಪರ್ಶಿಸುತ್ತದೆ.ಹತ್ತೊಂಬತನೆಯ ಮತ್ತು ಇಪ್ಪತ್ತನೆಯ ಶತಮಾನದ ಮೊದಲ ಘಟ್ಟದಲ್ಲೇ ಆರಂಭಗೊಂಡ ಒಂದನೆಯ ತರಂಗವು ಮಹಿಳೆಯರ ನಿಯಮ ಸಂರಕ್ಷಣೆ,ವಿವಾಹ,ಶಿಶುಪಾಲನೆ,ಆಸ್ತಿ ಹಕ್ಕು ಎಂಬಿತ್ಯಾದಿಗಳನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸಿತ್ತು. 1848 ರಲ್ಲಿ ನ್ಯೂಯಾರ್ಕಿನ ಸೆನೆಕಾ ಫಾಲ್ಸ್‍ನಲ್ಲಿ ಜರಗಿದ ಮಹಿಳಾ ಹಕ್ಕುಗಳ ಬೃಹತ್ ಸಮಾವೇಶವು ಅಮೇರಿಕನ್ ಫೆಮಿನಿಸಮಿಗೂ,ಸ್ತ್ರೀವಾದ ಇತಿಹಾಸದ ಪ್ರಥಮ ತರಂಗದ ಉದಯಕ್ಕೂ ಕಾರಣವಾಯಿತು ಎಂಬುವುದು ಹಲವರ ಅಭಿಪ್ರಾಯ.1960 ರ ದಶಕದಲ್ಲಿ ಆರಂಭಗೊಂಡ ಮಹಿಳಾವಾದದ ಹೊಸ ಆಶಯಗಳು ಮತ್ತು ಕ್ರಿಯಾಯೋಜನೆಗಳು ನಂತರದ ದಿನಗಳಲ್ಲಿ ದ್ವಿತೀಯ ತರಂಗವಾಗಿ ಪರಿಗಣಿಸಲ್ಪಟ್ಟಿತು.ಮುಂದೆ 1990 ರ ದಶಕಗಳಲ್ಲಿ ಪ್ರಾರಂಭವಾದ ತೃತೀಯ ತರಂಗವು ಕ್ರಾಂತಿಕಾರಿ ಬೆಳವಣಿಗೆಗೆ ಸಾಕ್ಷಿಯಾಯಿತಲ್ಲದೆ, ಅದರ ಜಾಡು ಹಿಡಿದಾಗಿದೆ ಅಂದಿನಿಂದ ಇವತ್ತಿನವರೆಗೂ ಸಮಕಾಲಿಕ ಸ್ತ್ರೀಮುನ್ನಡೆಗಳು ಸಂವೇದನೆ ನಡೆಸುತ್ತಿರುವುದು ಕೂಡಾ.ಈ ಎರಡೂ ತರಂಗಗಳನ್ನು ಒಂದಕ್ಕೊಂದು ಸರಿದೂಗಿಸಿ ನೋಡಿದರೆ "ಎರಡನೇಯ"ದು ಹೆಚ್ಚಿನ ಬದ್ಧತೆಯನ್ನು ಹೊಂದಿದ ಸಾಮಾಜಿಕ ನವ ಚಿಂತನೆಗಳನ್ನು ಪ್ರಸ್ತುತಪಡಿಸುವುದು ಎಂದು ನಮಗೆ ತಿಳಿಯುತ್ತದೆ.ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀ ಸಮುದಾಯವನ್ನು ಮಹಿಳಾವಾದದತ್ತ ಆಕರ್ಷಿಸುವವಲ್ಲಿ ಕೂಡಾ ಅದು ಯಶಸ್ವಿಯಾಗಿತ್ತು.ಸಮಾನ ಹಕ್ಕುಗಳು ,ಆರ್ಥಿಕ ಪ್ರಬಲತೆ,ವ್ಯಕ್ತಿ ಸ್ವಾತಂತ್ರ್ಯ,ರಾಷ್ಟ್ರೀಯ ಸಹಭಾಗಿತ್ವ ಇತ್ಯಾದಿಗಳಲ್ಲಿ ಸಮಾನವಾದ ಲಿಂಗನೀತಿ ಖಚಿತಗೊಳಿಸಬೇಕು ಎಂದಾಗಿತ್ತು ದ್ವಿತೀಯ ತರಂಗದ ವಾದ.ಕುಟುಂಬ ಲೈಂಗಿಕತೆ,ಉದ್ಯೋಗ ಹೀಗೆ ಮಹಿಳಾವಾದದ ಸರ್ವ ವಲಯಗಳನ್ನೂ ದ್ವಿತೀಯ ತರಂಗವು ಸ್ಪರ್ಶಿಸಿತ್ತು.
ಮಹಿಳಾ ದೌರ್ಜನ್ಯ ಮತ್ತು ಸಮಕಾಲಿಕ ಸ್ತ್ರೀವಾದದ ಅಸ್ತಿತ್ವವನ್ನು ಪೃಥಕ್ಕರಣಗೈದು ಕಣಕ್ಕಿಳಿದ ಫ್ರೆಂಚ್ ಲೇಖಕಿಯೂ,ತತ್ವ ಚಿಂತಕಿಯೂ ಆದ -ಸಿಮೊನ್ ಡಿ ಬ್ಯುವಾರ್ ರವರು ಆಧುನಿಕ ಸ್ತ್ರೀ ಮುನ್ನಡೆಗೆ ನೀಡಿದ ಕೊಡುಗೆಗಳು ಸಣ್ಣದೇನಲ್ಲ.ಅವರ ಪ್ರಸಿದ್ಧ ಕೃತಿಯಾದ "ದಿ ಸೆಕೆಂಡ್ ಸೆಕ್ಸ್" ಮಹಿಳೆಯ ಆತ್ಮನಿಷ್ಠೆಯ ಬಗೆಗಿನ ವಾಸ್ತವಗಳನ್ನು ಸೈದ್ಧಾಂತಿಕವಾಗಿ ಸ್ಪಷ್ಟಪಡಿಸುವಾಗ, ಸ್ತ್ರೀ ವಿಮೋಚನೆಯೆನ್ನುವುದು ಪುರುಷನ ವಿಮೋಚನೆಯೂ ಆಗಿದೆ ಎನ್ನುವ ವಾದವನ್ನು ಕಟ್ಟಿ ಕೊಡುತ್ತದೆ..1963 ರಲ್ಲಿ ಬಿಡುಗಡೆಗೊಂಡ ಜೆಟ್ಟಿ ಫ್ರೀಡನ್ ರ "ದಿ ಫೆಮಿನಲ್ ಮಿಸ್ಟೆಕ್" ಕೃತಿಯು ಅಮೇರಿಕಾದಲ್ಲಿ ಮಹಿಳಾವಾದದ ಎರಡನೇ ತರಂಗವನ್ನು ವಿಚ್ಛಿನ್ನಗೊಳಿಸಿ ಆ ಮೂಲಕ ಸಮಾಜವು ಬದಲಾವಣೆಯತ್ತ ಮುಖ ಮಾಡುವಂತೆ ಮಾಡಿತ್ತು.ಸಮರ್ಥರಾದ ಸ್ತ್ರೀಯರಿಗೆ ಸಿಗಬೇಕಾದ ಸಾಮಾಜಿಕ ಬೆಂಬಲ,ಹಕ್ಕುಗಳ ರಕ್ಷಣೆ ಮುಂತಾದ ಸ್ತ್ರೀವಾದದಿಂದ ಬೆರೆತ ಅಸ್ತಿತ್ವ ಚಿಂತನೆಗಳನ್ನು ಅವತರಿಸುವುದರೊಂದಿಗೆ, ಸ್ತ್ರೀಸಬಲೀಕರಣದ ಅವಶ್ಯಕತೆಯನ್ನು ಈ ಕೃತಿಯು ಪ್ರತಿಪಾದಿಸುತ್ತದೆ.ಉದ್ಯೋಗ ವಲಯಗಳಲ್ಲಿನ ಆರ್ಥಿಕ ಸಮಾನತೆ,ಕೌಟುಂಬಿಕ ಜವಾಬ್ದಾರಿಗಳ ಸಂರಕ್ಷಣೆಯಿಂದ ಮಾತ್ರ ಸಂತೃಪ್ತಿ ಪಡೆಯಲು ಸಾಧ್ಯವೆನ್ನುವ ಆಶಯವನ್ನು ಪ್ರಸ್ತುತ ಕೃತಿಯಲ್ಲಿ ಫ್ರೀಡನ್ ರವರು ಬಲವಾಗಿ ವಿಮರ್ಶಿಸುತ್ತಾರೆ.
ಮೊದಲನೆಯ ತರಂಗಕ್ಕಿಂತ ವಿಭಿನ್ನವಾದ ಹಲವು ದೃಷ್ಟಿಕೋನಗಳನ್ನು ಮುಂದಿಡುವ ದ್ವಿತೀಯ ತರಂಗವು ಸ್ತ್ರೀಯರು ದೌರ್ಜನ್ಯಕ್ಕೊಳಗಾಗುವುದರ ಉಧ್ಭವ,ಕೌಟುಂಬಿಕ ಭಾಗಿತ್ವ ಇತ್ಯಾದಿ ವಿಷಯಗಳಲ್ಲಿನ ಸೈದ್ಧಾಂತಿಕ ಚರ್ಚೆಗಳಿಗೆ ತೆರೆದ ವೇದಿಕೆಯಾಯಿತು.1970 ರಲ್ಲಿ ಬೆಸ್ಟ್ ಸೆಲ್ಲರ್ ಆಗಿದ್ದ ಕಾಟೇ ಮಿಲ್ಲರನ "ಸೆಕ್ಶುವೆಲ್ ಪಾಲಿಟಿಕ್ಸ್"ಕೃತಿಯು ಅಧಿಕಾರದ ರೂಪುರೇಶೆಯಲ್ಲಿ ಪ್ರಮೇಯವಾಗಿ ಸ್ವೀಕರಿಸಿದ್ದೂ ಸ್ತ್ರೀ ಪುರುಷ ಸಂಬಂಧವನ್ನಾಗಿದೆ. ಒಂದನೇ ಸ್ತ್ರೀವಾದ ತರಂಗದಂತೆಯೇ ದ್ವಿತೀಯ ಹಂತವೂ ವಿದ್ಯಾವಂತ ಮಧ್ಯಮವರ್ಗದ ಮಹಿಳೆಯರ ಪ್ರಗತಿಯ ಹಿತದೃಷ್ಟಿಯಿಂದಲೇ ಕೆಲಸ ಮಾಡಿತ್ತು.ಅವರ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಇದಕ್ಕೆ ಸಾಧ್ಯವಾದರೂ ಅಮೇರಿಕಾದಲ್ಲಿ ಆಫ್ರಿಕನ್ ವಂಶಜರು ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಈ ತರಂಗವು ವಿಫಲವಾಯಿತು ಎಂಬುವುದು ದಿಟ.ಎರಡನೇ ತರಂಗದ ಇಂತಹ ಸೋಲಿನ ಕಹಿ ಅನುಭವಗಳಿಗೆ ಪರಿಹಾರವೆಂಬಂತೆ ತೃತೀಯ ತರಂಗವು ಉದಯವಾಯಿತು.ಅದು 1990ರ ಮಧ್ಯದಲ್ಲಾಗಿತ್ತು.ಒಂದನೇ,ಎರಡನೇ ತರಂಗಗಳು ಎತ್ತಿ ಹಿಡಿದ ಸಂರಕ್ಷಣೆಯ ಮತ್ತು ನಿಯಮ ಪಾಲನೆಯ ಸಂಪೂರ್ಣ ಫಲವನ್ನು ತೃತೀಯ ತರಂಗವು ಅನುಭವಿಸಿತಾದರೂ ಈ ಹಿಂದಿನ ಕ್ರಿಯಾತ್ಮಕ ಚಟುವಟಿಕೆಗಳಲ್ಲಿನ ಕುಂದುಕೊರತೆಗಳನ್ನು ಪ್ರಶ್ನಿಸುವಲ್ಲಿ ಹಿಂಜರಿದಿಲ್ಲ.
ಸಮೂಹ ಮಾಧ್ಯಮಗಳ ಪ್ರಸಕ್ತಿ;
ಸಾಂಕೇತಿಕ ವಿಧ್ಯೆಯ ಈ ಯುಗದಲ್ಲಿ ಲಿಂಗತಾರತಮ್ಯ ಮತ್ತು ತಮ್ಮ ಹಕ್ಕುಗಳ ಸಂರಕ್ಷಣೆಗಾಗಿ ಸ್ತ್ರೀಯರು ಬಹಿರಂಗವಾಗಿ ಬೀದಿಗಿಳಿಯುತ್ತಿದ್ದಾರೆ. 2004 ರ "ಹಿ ಫಾರ ಶಿ", "ಟೈಮ್ಸ್ ಅಪ್" ಮುಂತಾದ ಮುನ್ನಡೆಗಳೂ, ಅಂತಿಮವಾಗಿ ಪ್ರಚಾರ ಗಿಟ್ಟಿಸಿದ ಮಿ-ಟು ಅಭಿಯಾನ ಕೂಡಾ ಇಲ್ಲಿ ಗಮನಾರ್ಹವೆನಿಸುತ್ತದೆ. ಸಿನಿಮಾ ಲೋಕದ 40 ಮಹಿಳೆಯರನ್ನು ಖ್ಯಾತ ಹಾಲಿವುಡ್ ನಿರ್ಮಾಪಕ ಹಾರ್ವಿ ವಿಲ್ಸ್ ಟೈನ್ ಎಂಬವರು ಲೈಂಗಿಕ ಪೀಡನೆಗೆ ಗುರಿಯಾಗಿಸಿದ್ದಾರೆ ಎನ್ನುವ ಆರೋಪವನ್ನು ಎತ್ತಿ ಹಿಡಿದು ಮಿ.ಟು ಅಭಿಯಾನ ಪ್ರಾರಂಭಗೊಂಡಿತ್ತು.ಮಹಿಳೆಯರು ತಮಗೆ ಸಂಬಂಧಿಸಿದ ಲೈಂಗಿಕ ಅಕ್ರಮಗಳನ್ನು ನೇರವಾಗಿ ತೆರೆದಿಡಲು ಸಾಮಾಜಿಕ ಮಾಧ್ಯಮಗಳ ಮೂಲಕ ಮಿ.ಟು ಪ್ರಚೋದನಕಾರಿಯಾಗಿತ್ತು.ಪ್ರಖ್ಯಾತರೂ ಅಲ್ಲದವರೂ ಆದ ಲಕ್ಷಕ್ಕೂ ಮಿಕ್ಕ ಜನರು ಮಿ.ಟು ವಿನ ಬೆಂಬಲದ ಭಾಗವಾದರು.ಜಿ.ಬಿ.ಟಿ.ಕ್ಯು ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳೂ ಕೂಡಾ ಇತ್ತೀಚೆಗೆ ಚರ್ಚೆಗೊಳಗಾಗುತ್ತಿದೆ. ಸ್ತ್ರೀ ವಿಮೋಚನಾ ಚಳುವಳಿಯಿಂದಾಗಿ ಮಹಿಳೆಗೆ ಅವಳ ಜೀವನವನ್ನು ಸ್ವತಃ ತಿಳಿದುಕೊಳ್ಳಲು ಸಾಧ್ಯವಾಯಿತು ಎಂಬುವುದರಲ್ಲಿ ಎರಡು ಮಾತಿಲ್ಲ.ಆದರೆ ಫೆಮಿನಿಸಂ ನ ಅರ್ಥ ಮತ್ತು ಪ್ರಾಯೊಗಿಕ ಸಾಮೀಪ್ಯದ ವಿಚಾರವಾಗಿ ಮಹಿಳೆಯರಿಗೆ ಮತ್ತು ಪುರುಷರಿಗೆ ಇದೀಗ ಭಿನ್ನಾಬಿಪ್ರಾಯಗಳಿವೆ.
ಸ್ತ್ರೀಪುರುಷ ಸಮತ್ವವು ಅನಿವಾರ್ಯವೆಂದು ಹೇಳುತ್ತಿರುವಾಗಲೇ ಸ್ವನಂಬಿಕೆಯೊಂದಿಗೂ, ಮೌಲ್ಯಗಳೊಂದಿಗೂ ಫೆಮಿನಿಸಂ ನ ಸಿದ್ಧಾಂತಗಳು ಸರಿದೂಗುವುದಿಲ್ಲ ಎಂದು ಕೆಲವರು ಹೇಳುವುದಿದೆ. ಫೆಮಿನಿಸಂನ ಹಿನ್ನಲೆಯ ರುವಾರಿಗಳು ಯಾರೆನ್ನುವ ಚರ್ಚೆಗಳು ಗರಿಗೆದರಿದರೆ ಪುರುಷ ಕೇಂದ್ರೀಕೃತ ಸಮಾಜದ ನಿಯಂತ್ರಣವು ತಮ್ಮ ಕೈಕೆಳಗಾಗಬೇಕೆಂದು ವಾದಿಸುವ ಶಕ್ತರೂ,ಸಾಮಥ್ರ್ಯರೂ ಆದ ಮಹಿಳೆಯರಾಗಿದ್ದಾರೆ ಎಂದು ತಿಳಿಯುತ್ತದೆ .ಪರಂಪರಾಗತವಾದ ಆಚಾರ ವಿಚಾರಗಳು,ಧಾರ್ಮಿಕ ನಂಬಿಕೆಗಳು,ಸ್ವಾಭಾವಿಕವೆನಿಸಿದ ಸ್ತ್ರೀಪುರುಷ ಸಂಬಂಧ ಮಾತ್ರವಾಗಿದೆ ಮಹಿಳಾವಾದದ ಅಥವಾ ಫೆಮಿನಿಸಂನ ಮರ್ಮ. ವಿವಾಹ,ಸಮಾಜ,ಸಂಸ್ಕøತಿ,ಅಧಿಕಾರ,ವ್ಯಾಪಾರ,ವಾಣಿಜ್ಯ,ಆರ್ಥಿಕ ಹಕ್ಕುಗಳು ಇತ್ಯಾದಿ ಮನುಷ್ಯ ಸಂಭಧಿಯಾದ ವ್ಯವಹಾರಗಳಲ್ಲಿ ಸ್ತ್ರೀ ಮತ್ತು ಪುರುಷ ಸಮನಾದರೆ ಪ್ರಾಯೋಗಿಕ ಸಮಸ್ಯೆಗಳು ಉದ್ಭವಿಸುವುದೆಂಬುದು ಫೆಮಿನಿಸಂನ ವಿಮರ್ಶಕರ ವಾದ.ಅಲ್ಲದೆ ಅಧಿಕಾರ,ಸಾಮಾಜಿಕ ವಲಯ,ಆರ್ಥಿಕ ಬಲ ಮುಂತಾದುವುಗಳಿಂದ ಪುರುಷನು ಬಹಿಷ್ಕøತನಾಗುವನೆಂದೂ ಇದು ಭಾರೀ ಪ್ರಮಾಣದ ಪ್ರತ್ಯಾಘಾತವನ್ನುಂಟು ಮಾಡಬಲ್ಲದು ಎಂಬುದು ಅವರ ವಾದದ ತಿರುಳು. ಜೈವಿಕವಾಗಿಯೇ ಹೆಣ್ಣು ಅಬಲೆಯಾದ ಕಾರಣ ಸ್ತ್ರೀಪುರುಷ ಸಮತ್ವ ಅಸಾಧ್ಯವೆಂದು ನಂಬುವವರಿದ್ದಾರೆ.ಸ್ತ್ರೀ ಪುರುಷ ಭೇದವಿಲ್ಲದೆ ಎಲ್ಲರಿಗೂ ಸಮಾನ ಹಕ್ಕು ಮತ್ತು ನೀತಿಗಳನ್ನು ನೀಡಬೇಕೆನ್ನುವ ಮಾನವ ಸಬಲೀಕರಣ ವಾದಕ್ಕೆ ಇದೀಗ ಪ್ರಸಕ್ತಿಯಾರ್ಜಿಸಿದೆ. ಇತ್ತೀಚಿಗಿನ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಕೆಲವೊಂದು ತೀರ್ಪುಗಳು ಕೂಡಾ ಇಲ್ಲಿ ಗಮನಾರ್ಹ.
ಹಾಗೇ ನೋಡಿದರೆ ನಮ್ಮ ಭಾರತೀಯ ಸಂಸ್ಕøತಿಯು ಕೂಡಾ ಸಮಾನತಾವಾದವನ್ನು ಅಕ್ಷರಶಃ ಒಪ್ಪಿಕೊಂಡಿದೆ. ಸಮಾಜದಲ್ಲಿ ಶೋಷಣೆಗೊಳಗಾಗುವ ಯಾವುದೇ ವರ್ಗವನ್ನು ಗುರುತಿಸಿ ಅವರಿಗೆ ರಕ್ಷಣೆ ನೀಡುವುದು ನಮ್ಮ ಸಮುದಾಯಗಳ ಆದ್ಯಕರ್ತವ್ಯವಾಗಿರಬೇಕು. ಹೆಣ್ಣು ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ ಎಂದು ತಿಳಿಯುವಾಗ ಸಮುದಾಯವನ್ನು ಅಂತಹ ವಿಘ್ನ ಪರಿಸ್ಥಿತಿಯಿಂದ ಹೊರತಂದು,ಸರಿದಾರಿಗೆ ತರುವಲ್ಲಿ ಆಗುವ ಹೋರಾಟಗಳು ಎಂದಿಗೂ ಸ್ತ್ರೀವಾದವೆನಿಸಲಾರದು. ಸಮಾಜದಲ್ಲಿ ಶೋಷಣೆ,ದಬ್ಬಾಳಿಕೆಗಳು ಇಲ್ಲವಾದಲ್ಲಿ ಇಂತಹ ಸಂದರ್ಭಗಳೇ ಉಂಟಾಗದು ನಿಜ.ಆದರೆ ಆ ನಿಟ್ಟಿನಲ್ಲಿಯೋಚಿಸುವ ಒಳ್ಳೆಯ ಮನಸ್ಥಿತಿ ನಮ್ಮದಾಗಿರಬೇಕು. ಹೆಣ್ಣಿನ ಶೈಕ್ಷಣಿಕ ವಿಚಾರಗಳು ಕೂಡಾ ಈ ರೀತಿಯಲ್ಲಿಯೇ ಕೂಲಂಕುಷವಾಗಿ ಅವಲೋಕನ ಮಾಡಬೇಕಿದೆ. ವಿದ್ಯೆ ಪಡೆದು ಸಮಾಜದಲ್ಲಿ ಸ್ವಾವಲಂಬಿ ಬದುಕು ರೂಪಿಸುವೆ ಎನ್ನುತ್ತಾ ಹೆಣ್ಣೊಬ್ಬಳು ಮುಂದೆ ಬಂದರೆ ಅದು ಎಂದಿಗೂ ಮಹಿಳಾವಾದ ಆಗಲಾರದು.ಅದನ್ನು ಅವಳ ಮನೋದೃಢತೆಯ ಆತ್ಮವಿಶ್ವಾಸವೆನ್ನಬಹುದು.
ಇನ್ನೊಂದೆಡೆ ಸಮಾಜದಲ್ಲಿ ನಿರಂತರಗರಿಗೆದರುತ್ತಿರುವ ವರದಕ್ಷಿಣೆ.ಭ್ರೂಣಹತ್ಯೆ,ಅತ್ಯಾಚಾರ,ವೇಶ್ಯಾವಾಟಿಕೆಯಂತಹ ಪ್ರಕರಣಗಳು ಸ್ತ್ರೀ ಸಮುದಾಯದ ಘನತೆಗೆ ಧಕ್ಕೆಯುಂಟು ಮಾಡುತ್ತಿದೆ ,ಮಹಿಳಾ ಹಕ್ಕುಗಳ ನಿರಾಕರಣೆ,ಮಹಿಳಾ ಶಿಕ್ಷಣ ಇತ್ಯಾದಿ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳದೆ,ಧ್ವನಿಯೆತ್ತಿ ಆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹಿಳಾವಾದದ ಪಾತ್ರವೂ ಇದೆ. ಫೆಮಿನಿಸಂ ಎಂಬ ಪದವು ಪಾಶ್ಚಾತ್ಯ ಕಲ್ಪನೆಯಾಗಿದ್ದರೂ ಅದರ ಕೊಂಡಿಗಳು ಇಂದು ವಿಶ್ವವ್ಯಾಪಿ ಹರಡಿವೆ. ಮಹಿಳಾವಾದದ ಹಳೆಯ ಚಿಂತನೆಗಳು ಇಂದು ಬಹಳಷ್ಟು ಬದಲಾಗಿದೆ.ಹೆಣ್ಣು ತನ್ನ ಸಮಾನತಾವಾದದ ಪರಿಕಲ್ಪನೆಗಳನ್ನು ಸಡಿಲ ಮಾಡಿಕೊಂಡು ಎಲ್ಲರೊಂದಿಗೂ ಬೆರೆತು ಬದುಕುವಲ್ಲಿಯೇ ಸಂತೋಷವನ್ನು ಕಾಣುತ್ತಾಳೆ.ಆದರೆ ನಮ್ಮಿಂದ ನಿರೀಕ್ಷಿಸಿದ ಮನುಷ್ಯತ್ವವು ಅವರಿಗೆ ಸಿಗುತ್ತಿಲ್ಲ. ಹಲವು ದಿಕ್ಕುಗಳಿಂದ ರಣಹದ್ದುಗಳಂತೆ ರಾಕ್ಷಸೀಯ ಕೈಗಳು ಕಾಮದಾಹತೀರಿಸುವ ಗೋಜಿನಲ್ಲಿ ಮುಗ್ಧ ಹಸುಗೂಸುಗಳೆನ್ನದೆ ಸಾವಿರಾರು ಮಹಿಳೆಯರು ಇಂದು ಬಲಿಪಶುಗಳಾಗುತ್ತಿದ್ದಾರೆ .ದೆಹಲಿಯ ನಿರ್ಭಯಾ ಪ್ರಕರಣ,ಕಣ್ಣೀರ ಕಥೆ ಹೇಳುವ ಕಥುವಾ ಪ್ರಕರಣ,ಇತ್ತೀಚಿಗಿನ ಪಾದ್ರಿಯೊಬ್ಬರ ಮೇಲಿನ ಅತ್ಯಾಚಾರಪ್ರಕರಣ ಎಲ್ಲವೂ ಧರ್ಮ,ಜಾತಿ,ಮತ,ಪಥ,ಪಂಗಡಗಳ ಸರಹದ್ದುಗಳನ್ನು ಮೀರಿ ಸಾಗುತ್ತಿರುವಾಗ,ಮೇಲಿನ ಎಲ್ಲಾ ಘಟನೆಗನ್ನು ಮಾನವತಾವಾದಿ ಮನೋಭಾವನೆಯಲ್ಲಿ,ಮಾನವೀಯ ಮೌಲ್ಯಗಳ ಆಧಾರದ ಮೇಲೆ ಗುರುತಿಸಬೇಕೇ ಹೊರತು ಸ್ತ್ರೀವಾದದ ಕಣ್ಣಿನಿಂದಲ್ಲ.ಈ ನಿಟ್ಟಿನಲ್ಲಿ ನಮ್ಮ ಸಮಾಜವು ಕಾರ್ಯಪ್ರವೃತ್ತರಾಗಬೇಕಿದೆ.
ಕಾಮೆಂಟ್‌ಗಳು