
ಸಿಹಿ ಪಾನೀಯಗಳೆಂದರೆ ಎಲ್ಲರಿಗೂ ಬಲು ಇಷ್ಟ.ಅದರಲ್ಲೂ ಸುಡು ಬೇಸಿಗೆಯಲ್ಲಂತೂ ತಂಪು ಪಾನೀಯಗಳ ಹವಾ ತುಂಬಾ ಜೋರಾಗೇ ಇರುತ್ತೆ. ದಣಿದು ಬಂದರಂತೂ ಇದನ್ನು ನೋಡಿದಾಕ್ಷಣ ಜನ ಅತ್ತ ಮುಗಿ ಬೀಳುತ್ತಾರೆ. ಕಾಲ ಬದಲಾದಂತೆಲ್ಲಾ ಜನರ ಅಭಿರುಚಿಯೂ ಬದಲಾಗಿರುತ್ತದೆ ಅನ್ನೋದಕ್ಕೆ ಈ ಕೇರಳದ ಕುಲುಕ್ಕಿ ಶರಬತ್ತೇ ಸಾಕ್ಷಿಯಾಗಿದೆ. ಈ ಬಾರಿಯ ನುಡಿಸಿರಿಯಲ್ಲೂ ಕೂಡಾ ಹಲವು ಕುಲುಕ್ಕಿ ಶರಬತ್ತಿನ ಸ್ಟಾಲ್‍ಗಳು ಅಲ್ಲಲ್ಲಿ ರಾರಾಜಿಸುತ್ತ ಜನರ ಬಾಯಲ್ಲಿ ನೀರೂರಿಸುತ್ತಿದೆ. ಕೇರಳದ ಈ ವಿಭಿನ್ನ ಶೈಲಿಯ ಪಾನೀಯವನ್ನ ಹೇಗೆ ತಯಾರಿಸುತ್ತಾರೆ. ಬಾಯಲ್ಲಿ ನೀರೂರಿಸುವ ಇದರ ರುಚಿಯ ಹಿನ್ನಲೆಯ ರಹಸ್ಯಗಳೇನು? ಈ ಬಗ್ಗೆ ಒಂದು ಸಣ್ಣ ಮಾಹಿತಿ ಇಲ್ಲಿದೆ.
ದೇವರ ನಾಡೆಂದೇ ಪ್ರಖ್ಯಾತಿ ಹೊಂದಿದ ಕೇರಳ, ಚಾರಣಿಗರನ್ನ ಕೈಬೀಸಿ ಕರೆಯುವ ಪ್ರವಾಸಿ ತಾಣ. ಅರಬ್ಬೀ ಸಮುದ್ರದೊಂದಿಗೆ ಮೈಚಾಚಿ ನಿಂತ ಈ ನಾಡ ಸೊಬಗು ಅದೆಷ್ಟೋ ದೇಶ ವಿದೇಶೀ ಪ್ರವಾಸಿಗರನ್ನ ಅತ್ತ ಆಕರ್ಷಿಸುತ್ತಿದೆ.ಪ್ರಾಕೃತಿಕ ಅಂದವ ಸವಿಯಲು ಬರುವವರನ್ನ ಸೆಳೆಯಲೆಂದೇ ಹೌಸ್ ಬೋಟ್,ನಾಡ ದೋಣಿ ಉತ್ಸವಗಳಂತಹ ವಿನೂತನ ಪ್ರಯತ್ನಗಳನ್ನ ಮಾಡಿ ಸೈ ಎನಿಸಿಕೊಂಡವರು ಕೇರಳೀಯರು. ಅಂತಹ ಪ್ರಯತ್ನಗಳ ಪೈಕಿ ಪಾನೀಯದಲ್ಲಾದ ಒಂದು ವಿಶಿಷ್ಟ ಪ್ರಯೋಗವೇ ಈ ಕುಲುಕ್ಕಿ ಶರಬತ್ತು. ಮಾರುಕಟ್ಟೆಯಲ್ಲಿ ಸಿಗುವ ಎನರ್ಜಿ ಡ್ರಿಂಕ್ಸ್ ಗಳಿಗೂ ಪೈಪೋಟಿ ನೀಡಬಲ್ಲ ಇದರ ಅಲೆ ಇದೀಗ ನಮ್ಮ ರಾಜ್ಯಕ್ಕೂ ಕಾಲಿಟ್ಟಿದೆ.ಅಂದ ಹಾಗೆ ಈ ಶರಬತ್ತಿನ ಒಳಗುಟ್ಟನ್ನು ನಿಮ್ಮ ಮುಂದಿಡುತ್ತಿದ್ದೇನೆ.
ನಿಂಬೆ ಹಣ್ಣು,ಸಕ್ಕರೆ ಪಾಕ,ಕಾಯಿ ಮೆಣಸು,ಶುಂಠಿ ದ್ರಾವಕ,ಕಸ್‍ಕಸ್,ಸೋಡಾ ಮುಂತಾದ ಸಾಮಾಗ್ರಿಗಳನ್ನು ಈ ರುಚಿಕರ ಪಾನೀಯವನ್ನ ತಯಾರಿಸಲು ಬಳಸಲಾಗುತ್ತದೆ. ಪಾತ್ರೆಯೊಂದರಲ್ಲಿ ಸೋಡಾ ಮತ್ತು ಸಕ್ಕರೆ ಪಾಕವನ್ನು ಮಿಶ್ರಣ ಮಾಡಿ ನಿಂಬೆ ರಸವನ್ನು ಸೇರಿಸಿ 20 ಸೆಕೆಂಡ್ಸ್ ಗಳ ಕಾಲ ಚೆನ್ನಾಗಿ ಕುಲುಕಿಸಬೇಕು... ಇಲ್ಲಿಗೆ ಈ ಪಾನೀಯ ಕುಡಿಯಲು ಸಿದ್ಧ..
ಇದರ ತಯಾರಿಕೆಯಲ್ಲಿ ಕೈಚಳಕ ಹೊಂದಿದ ಕೆಲ ಯುವಕರು ಗ್ಲಾಸುಗಳನ್ನು ಅತ್ತಿತ್ತ ಬಿಸಾಡಿ ಕ್ಯಾಚ್ ಹಿಡಿದು ಗ್ರಾಹಕರಿಗೆ ಮನರಂಜನೆಯನ್ನೂ ನೀಡುತ್ತಾರೆ. ಕಳೆದ ಹಲವು ವರ್ಷಗಳಿಂದ ಇದೇ ತಯಾರಿಯಲ್ಲಿ ಪಳಗಿರುವ ಕೇರಳದ ಪ್ರತಿಷ್ಟಿತ ಕುಲುಕ್ಕಿ ಹಬ್‍ನ ಕೆಲಸಗಾರರು ಹೇಳುವಂತೆ ಕೇರಳದಲ್ಲಿ ಪ್ರತ್ಯೇಕ ಸೀಸನ್‍ಗಳಲ್ಲಿ ಇದು ಭಾರೀ ವ್ಯಾಪಾರವನ್ನು ಗಿಟ್ಟಿಸುತ್ತಲ್ಲದೆ ಕೊಚ್ಚಿ ಒಳಗೊಂಡಂತೆ ರಾಜ್ಯದ ಎಲ್ಲಾ ಬೀಚ್‍ಗಳಲ್ಲೂ ಕುಲುಕ್ಕಿ ಸ್ಟಾಲ್‍ಗಳು ತಲೆಯೆತ್ತುತ್ತವೆ. ಅಲ್ಲದೇ ಇದರ ಸವಿಯನ್ನು ಹೀರಲು ದೂರದೂರಿನಿಂದಲೂ ಗ್ರಾಹಕರು ಬರುತ್ತಾರಂತೆ. ಅಂತೂ ನುಡಿಸಿರಿಯಲ್ಲಿ ಸಾಹಿತ್ಯಪಾಕವನ್ನುಂಡು ಕುಲುಕ್ಕಿ ಶರಬತ್ತಿನ ರುಚಿಯನ್ನ ಸವಿಯಲು ಜನರು ಸ್ಟಾಲಲ್ಲಿ ಸಾಲುಗಟ್ಟಿ ನಿಂತಿರೋದು ಕಂಡು ಬಂತು.

ನಿಝಾಮ್ ಅನ್ಸಾರಿ
ಕಾಮೆಂಟ್‌ಗಳು