ಎರಡು ತಿಂಗಳ ಹಿಂದೆ ಮಂಗಳೂರಿನ ರಥಬೀದಿಯಲ್ಲಿರುವ ಸರ್ಕಾರಿ ಕಾಲೇಜಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಅಲ್ಲಿ ಹೋಗಿ ನೋಡಿದರೆ, ಕಾಲೇಜು ವತಿಯಿಂದ ಪತ್ರಿಕೋದ್ಯಮದ ನಾನಾ ಆಯಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ವರ್ಕ್‍ಶಾಪ್ ಹಮ್ಮಿಕೊಳ್ಳಲಾಗಿತ್ತು. ನಾನಂತೂ ಯಾವ ಕಾರಣಕ್ಕೆ ಅಲ್ಲಿ ಬಂದು ತಲುಪಿದೆನೋ ಗೊತ್ತಿಲ್ಲ, ವರ್ಕ್‍ಶಾಪ್ ಮುಗಿಯುವಷ್ಟರಲ್ಲಿ ಪುಸ್ತಕವೊಂದು ಕೊಡುಗೆಯಾಗಿ ನನ್ನ ಕೈ ಸೇರಿತ್ತು. ಅದು ಅಲ್ಲಿನ ಅಧ್ಯಾಪಕಿ ಜಯಶ್ರೀ ಬಿ.ಕದ್ರಿ ಅವರ ‘ತೆರೆದಂತೆ ಹಾದಿ’ ಎಂಬ ವೈಚಾರಿಕ ಬರಹಗಳ ಸಂಗ್ರಹ. ನಿನ್ನೆ ಮನೇಲಿ ನನ್ನ ಪದವಿ ಸರ್ಟಿಫಿಕೇಟ್‍ಗಾಗಿ ಹುಡುಕಾಡುತ್ತಿದ್ದಾಗ, ಈ ಪುಸ್ತಕ ಸಿಕ್ಕಿತು. ಅದನ್ನು ನನ್ನ ಓದಿನ ಪಟ್ಟಿಗೆ ಸೇರಿಸಲು ಇದೇ ಸಕಾಲ ಅಂದುಕೊಂಡು ಕೈಗೆತ್ತಿಕೊಂಡೆ. ಅಂದ ಹಾಗೆ, ಪದವಿ ಸರ್ಟಿಫಿಕೇಟ್ ಹುಡುಕುತ್ತಿದ್ದೆಂದೆನಲ್ಲಾ. ನನ್ನ ಪದವಿಗೂ, ರಥಬೀದಿಯ ಆ ಕಾಲೇಜಿಗೂ ಅವಿನಾಭಾವ ಸಂಬಂಧವಿದೆ. ಮೂರು ವರ್ಷಗಳ ಪದವಿ ಪರೀಕ್ಷೆಗಳನ್ನು ಬರೆದಿದ್ದು ಅದೇ ಕಾಲೇಜಿನಲ್ಲಿ. ಅದಕ್ಕೂ ಮುನ್ನ ಎಸ್ಸೆಸೆಲ್ಸಿ ಪರೀಕ್ಷೆ ಬರೆದಿದ್ದೂ ಕೂಡಾ ಅಲ್ಲೇ ಹತ್ತಿರದ ಶಾಲೆಯೊಂದರಲ್ಲಿ. ಹಾಗಾಗಿ, ರಥಬೀದಿಯ ಆ ಬೀದಿಗಳು ಮತ್ತು ಶಾಲಾ, ಕಾಲೇಜು ಆವರಣ ಮನಸ್ಸಿಗೆ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ.
ಏನೇ ಇರಲಿ, ಅಂತೂ ಜಯಶ್ರೀ ಮೇಡಂ ನಮ್ಮನ್ನು ಬರಮಾಡಿಕೊಂಡ ರೀತಿ, ಅವರ ನಗುಮೊಗದ ಮಾತು, ತನ್ನ ವಿದ್ಯಾರ್ಥಿಗಳು ಏನಾದರೂ ಕಲಿಯಬೇಕೆಂಬ ಹಂಬಲ, ತುಡಿತ ಅದರಲ್ಲೂ ಅವರ ಸೌಮ್ಯ ನಡವಳಿಕೆ ಇವೆಲ್ಲವನ್ನೂ ನಾನು ದೂರದಿಂದಲೇ ನೋಡುತ್ತಿದ್ದೆ. ನಿಜ ಹೇಳಬೇಕೆಂದರೆ, ಅವರೊಬ್ಬರು ಲೇಖಕಿ ಅನ್ನುವ ವಿಚಾರ ನನಗೆ ಆವರೆಗೂ ತಿಳಿದಿರಲಿಲ್ಲ. ನಂತರ ನಮ್ಮನ್ನು ಆಫೀಸಿಗೆ ಕರೆದು ಮಾತನಾಡಿಸಿದರು. ಚಾ, ತಿಂಡಿಯ ಸತ್ಕಾರವೂ ಆಯಿತು. ನಮ್ಮ ವಿಭಾಗದ ಮುಖ್ಯಸ್ಥರಾದ ಪೆಜತ್ತಾಯ ಸರ್,( ಪೆಜತ್ತಾಯ ಸರ್ ಕೊಟ್ಟ ಸತ್ಕಾರವನ್ನೂ ಮರೆಯುವಂತಿಲ್ಲ) ಚೈತನ್ಯ ಸರ್ ನಮ್ ಜೊತೆಗಿದ್ದರು. ಕುಶಲೋಪರಿಯ ನಡುವೆ ಸರ್, ನಮ್ಮೆಲ್ಲರ ಪರಿಚಯ ಹೇಳಿದಾಗ, ಮೇಡಂ ನನ್ನ ಹಿನ್ನೆಲೆ ಬಗ್ಗೆ ‘ರೇರ್ ಕಾಂಬಿಬೇಶನ್’ ಅಂತ ಪ್ರತಿಕ್ರಿಯಿಸಿದ್ದಾಗಿ ಅಷ್ಟು ಮಾತ್ರ ನೆನಪಿದೆ.
ಪುಸ್ತಕದ ಬಗ್ಗೆ ಮಾತಾಡುವ ಮುನ್ನ ಇವಿಷ್ಟು ಹೇಳಲೇಬೇಕು ಅಂತ ಅನಿಸಿತು. ಏನೇ ಇರಲಿ, ಇನ್ನು ವಿಷಯಕ್ಕೆ ಬರೋಣ. ತೆರೆದಂತೆ ಹಾದಿಯಲ್ಲಿ, ಒಟ್ಟು 55 ಲೇಖನಗಳಿವೆ. ಅವುಗಳಲ್ಲಿ ಸ್ತ್ರೀ ಪರವಾದವುಗಳು, ಸಾಮಾಜಿಕ ಸಮಸ್ಯೆಗಳು, ಒಳತುಡಿತಗಳು, ಸಾಹಿತ್ಯ ವಿಮರ್ಶೆಗಳು, ಸ್ತ್ರೀ ಸಬಲೀಕರಣದ ನಾನಾ ಮುಖಗಳು, ಮುಗ್ಧ ಮನಸ್ಸುಗಳ ಸಂಕೋಚಗಳು, ನಗರ-ಹಳ್ಳಿಗಳ ಜೀವನ ಹೀಗೇ ವಿವಿಧ ಆಯಾಮಗಳನ್ನು ಸ್ಪರ್ಶಿಸುತ್ತವೆ.
ಜಯಶ್ರೀ ಅವರ ಬರಹಗಳಲ್ಲಿ ಹೆಚ್ಚಾಗಿ ಧಾರವಾಹಿಗಳು ಹಾಗೂ ದೃಶ್ಯಮಾಧ್ಯಮಗಳ ಜಾಹೀರಾತು ಮನಸ್ಥಿತಿಯನ್ನು ಪ್ರಶ್ನಿಸುತ್ತಾರೆ. ಕೆಲವೊಂದೆಡೆ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡದ್ದಿದೆ. ಜೊತೆಗೆ, ಹೆಣ್ಣು ಗೃಹಿಣಿಯಾಗಿಯೇ ಉಳಿಯಬೇಕಾದವಳು, ತನ್ನ ಜೀವನಪೂರ್ತಿ ಗಂಡನ ಅಂಗಿಯ ಕಾಲರ್‍ನಲ್ಲಿರುವ ಕೊಳೆ ಬಿಡಿಸಲೂ, ಮಕ್ಕಳನ್ನು ಹೆತ್ತು ಹೊತ್ತು ಸಾಕಲು ಸೀಮಿತವಾದವಳು ಎನ್ನುವ ಸ್ತ್ರೀ ಕುಲದ ಬಗೆಗಿನ ತಾತ್ಸಾರ ಮನೋಭಾವ ಹುಟ್ಟಿಕೊಳ್ಳಲು ಪುರುಷ ಪ್ರಧಾನ ವ್ಯವಸ್ಥೆಯನ್ನು ವೈಭವೀಕರಿಸುವ ದೃಶ್ಯ ಮಾಧ್ಯಮಗಳ ಜಾಹೀರಾತುಗಳನ್ನೇ ಹೊಣೆಗಾರರನ್ನಾಗಿಸುತ್ತಾರೆ. ಅವುಗಳ ಅಪಾಯಗಳ ಬಗೆಗೆ ಅಲ್ಲಲ್ಲಿ ಎಚ್ಚರಿಕೆ ನೀಡುತ್ತಾರೆ. ನಗರ ಹಾಗೂ ಹಳ್ಳಿಯ ಜೀವನವನ್ನು ತುಲನೆ ಮಾಡಿ, ನಗರದ ಜೀವನ ಯಾಕೆ, ಯಾವ ಆಯಾಮಗಳಲ್ಲೆಲ್ಲಾ ಹಳ್ಳಿಗಿಂತ ಬೆಟರ್ ಅನ್ನೋದನ್ನ ಸಮರ್ಥಿಸುತ್ತಾರೆ.
‘ಒಗ್ಗರಣೆ ಸದ್ದಿನಲ್ಲಿ ಕಳೆದು ಹೋಗುವವರು’ ಎಂಬ ಲೇಖನದ ಮೂಲಕ ಸ್ತ್ರೀವಾದಿಗಳೆಂದರೆ, ಪುರುಷ ಸಂಕುಲವನ್ನು ದ್ವೇಷಿಸುವವರೋ, ಅಸಡ್ಡಾಳವಾಗಿ ಬಟ್ಟೆ ತೊಟ್ಟು ಜಗತ್ತಿಗೆ ಕ್ಯಾರೆನ್ನದೆ ಬದುಕುವವರು ಅನ್ನುವವರೊಂದಿಗೆ, ಮಹಿಳೆ ಅವಳಿಗೆ ಸಿಗಬೇಕಾದ ಸವಲತ್ತು, ಆದರ, ಗೌರವಗಳಿಗಾಗಿ ದನಿಯೆತ್ತುವುದು ತಪ್ಪೇ ಎಂದು ಕೇಳುತ್ತಾರೆ.
ಸ್ಮಿತಾ ಅಮೃತರಾಜ್ ಅವರು ಬೆನ್ನುಡಿಯಲ್ಲಿ ಹೇಳುವಂತೆ, ಜಯಶ್ರೀ ಅವರ ಲೇಖನಗಳ ಕೇಂದ್ರ ಬಿಂದು ಮಹಿಳೆ. ಅವರ ಅಂತಃಕರಣ ಮಿಡಿಯುವುದು ಸದ್ದಿಲ್ಲದೇ ಅಡಗಿ ಹೋಗುವ ಹೆಣ್ಣುಮಕ್ಕಳ ಮೂಕದನಿಗಳಿಗೆ, ಸಮಾಜದ ಮಧ್ಯಮವರ್ಗದವರ, ಅಸಹಾಯಕರ ಒಳರೋದನಗಳಿಗೆ ಅವರ ಬರಹಗಳು ಒಮ್ಮೊಮ್ಮೆ ಗದ್ಯದಂತೆ, ಮಗದೊಮ್ಮೆ ಕಾವ್ಯದಂತೆಯೂ ಕೇಳಿಸಿಕೊಂಡು ಹೋಗಬಲ್ಲದು.
ಪ್ರತಿ ಲೇಖನಗಳನ್ನೂ ಯಾವುದಾದರೊಂದು ಕವನ ಇಲ್ಲವೇ ಹಾಡುಗಳ ಸಾಲುಗಳೊಂದಿಗೆ ಆರಂಭಿಸುವುದು ಅವರ ಬರಹದ ವಿಶೇಷತೆ ಅಂತ ಅನಿಸಿತು. ಮಕ್ಕಳ ಸಾಹಿತ್ಯ ಕೃತಿಗಳು, ಮಹಿಳಾ ಲೇಖಕಿಯರು ಮತ್ತು ಅವರ ಕೃತಿಗಳ ಬಗೆಗಿನ ವಿಮರ್ಶೆ ಹಲವು ವಿಚಾರಗಳ ಕಡೆಗೆ ನಮ್ಮನ್ನು ಸೆಳೆಯುತ್ತದೆ. ಒಟ್ಟಿನ ಮೇಲೆ ‘ತೆರೆದಂತೆ ಹಾದಿ’ ಬಿ.ಎಂ ರೋಹಿಣಿ ಅವರು ಹೇಳುವಂತೆ, ಇಲ್ಲಿ ಲೇಖಕಿ, ಸಮಾಜದ ಕೊರತೆಗಳಿಗೆಲ್ಲಾ ತನ್ನಲ್ಲಿ ಪರಿಹಾರವಿದೆಯೆಂಬ ಹಿರಿತನದಿಂದ ಬೀಗದೆ, ದೋಷಗಳ ಪಟ್ಟಿ ಮಾಡುವ ಪರೀಕ್ಷಕನಂತೆ ರೇಗದೆ, ಭವಿಷ್ಯ ಹೇಳುವವನಂತೆ ಉಪದೇಶಿಸದೆ, ಶಾಂತ ಮನಸ್ಥಿತಿಯಲ್ಲಿ ಕುಳಿತು ವಿಷಯಗಳ ಮಂಥನ ಮಾಡಿ ತನ್ನ ಸಲಹೆಗಳನ್ನು ವ್ಯಕ್ತಪಡಿಸಿದ್ದಾರೆ.
https://veekshakaa.wordpress.com/2020/04/21/ತೆರೆದಂತೆ-ಹಾದಿ-ಈ-ದಿನದ-ಓದ
https://veekshakaa.wordpress.com/2020/04/21/ತೆರೆದಂತೆ-ಹಾದಿ-ಈ-ದಿನದ-ಓದ
ಕಾಮೆಂಟ್‌ಗಳು