ಖಲೀಫ ಉಮರ್ ಆಡಳಿತವನ್ನು ನೆನಪಿಸಿದ ಕೆನ್ಯಾದ ಈ ಘಟನೆ..
ಅದು ಹಝ್ರತ್ ಉಮರ್ (ರ) ರ ಆಡಳಿತ ಕಾಲ. ತನ್ನ ಆಡಳಿತ ಅವಧಿಯಲ್ಲಿ, ರಾಷ್ಟ್ರದ ಯಾರೂ ಕೂಡಾ ಸಂಕಷ್ಟಕ್ಕೆ ಗುರಿಯಾಗಬಾರದೆಂಬ ಮಹತ್ವದ ನಿರ್ಧಾರ ಉಮರ್ ಅವರದ್ದಾಗಿತ್ತು. ಹಾಗಾಗಿ, ಹಗಲು ರಾತ್ರಿಯೆನ್ನದೆ ಜನರಿಗಾಗಿ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಡಿಪಾಗಿಡುತ್ತಿದ್ದರು. ಅದಕ್ಕಾಗಿಯೇ ಸಿಬ್ಬಂದಿಗಳನ್ನು ನೇಮಿಸಿದ್ದರಲ್ಲದೆ, ರಾತ್ರಿ ಪಾಳಿಯಲ್ಲಿ ತಾನೇ ಸ್ವತಃ ಜನರ ಸುಖ ದುಃಖಗಳನ್ನು ಅರಿಯಲೆಂದು ಒಬ್ಬರನ್ನು ಜೊತೆಗೂಡಿಸಿ ಹೊರಟು ಬಿಡುತ್ತಿದ್ದರು.
ಅದೊಂದು ದಿನ ರಾತ್ರಿ, ಇಡೀ ಊರಿಗೆ ಊರೇ ನಿಶ್ಯಬ್ದವಾಗಿದೆ. ಜನರು ಶಾಂತ ನಿದ್ರೆಯಲ್ಲಿ ಮುಳುಗಿದ್ದಾರೆ. ಹಝ್ರತ್ ಉಮರ್ ತನ್ನ ಜೊತೆ ಅಸ್ಲಮ್ ಅವರನ್ನು ಜೊತೆಗೂಡಿಸಿಕೊಂಡು ಅರೇಬಿಯಾ ಮರುಭೂಮಿಯ ಪ್ರತಿಯೊಂದು ಗುಡಿಸಲುಗಳ ಹಾದಿಯಾಗಿ ಸಾಗುತ್ತಲಿದ್ದಾರೆ. ಹೌದು, ರಾಜಠೀವಿಯಲ್ಲಿ ಮೆರೆಯಬೇಕಿದ್ದ, ರಾಜಾತಿಥ್ಯವನ್ನುಂಡು ಮಲಗಬೇಕಾಗಿದ್ದ ಸಮಯವದು. ಇಲ್ಲ ತನ್ನ ಎಂದಿನ ದಿನಚರಿಯಂತೆ ಇದು ನಡೆಯಲೇಬೇಕು. ಪ್ರಜೆಗಳೆಲ್ಲರೂ ಉಮರ್ ನ ಆಡಳಿತದಲ್ಲಿ ಸುಖ ನಿದ್ರೆ ಅನುಭವಿಸಿದರೆ ಮಾತ್ರ ತನಗೂ ನಿದ್ರಿಸಲು ಸಾಧ್ಯ. ಹಾಗಾಗಿ ಉಮರ್ ಖಲೀಫರ ವೇಷ ಕಳಚಿಟ್ಟು ಒಬ್ಬ ಸಾಮಾನ್ಯನಂತೆ ಈಗ ಹೊರಟಿದ್ದಾರೆ.
ನಿಜಕ್ಕೂ ಈ ಒಂದು ಘಟನೆ ಜಗತ್ತಿನ ಎಲ್ಲಾ ಆಡಳಿತಗಾರಿಗೂ ಒಬ್ಬ ನಿಷ್ಟಾವಂತ ಆಡಳಿತಕಾರ ಹೇಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಕಳೆದ ದಿನ ಕೆನ್ಯಾದ ಮೊಂಬಾಸ ಎಂಬಲ್ಲಿ ನಡೆದ ಮನಕಲಕುವ ಒಂದು ಘಟನೆಯ, ಖಲೀಫ ಉಮರ್ ಆಡಳಿತದ ಇದೇ ಘಟನೆಯನ್ನು ಕಣ್ಣ ಮುಂದೆ ಕಟ್ಟಿಕೊಡುವಂತೆ ಮಾಡಿತು. ಎಂಟು ಮಕ್ಕಳ ವಿಧವೆ ತಾಯೊಯೊಬ್ಬರು ಆಹಾರವಿಲ್ಲದೆ ಕಲ್ಲುಗಳನ್ನು ಬೇಯಿಸಿದ ದೃಶ್ಯಗಳು ಟ್ವಿಟರ್ ಸೇರಿದಂತೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಕೆನ್ಯಾದ ನಾಗರಿಕರು ಆ ಮಹಿಳೆಯ ನೆರವಿಗೆ ಬಂದಿದ್ದಾರೆ.
*******************************************************************************
ಅವರಿಬ್ಬರೂ ಈಗ ಮದೀನದ ಪ್ರ್ಯಾಂತ್ಯ ಪ್ರದೇಶವನ್ನು ತಲುಪಿದ್ದಾರೆ. ನಡೆಯುತ್ತಿದ್ದಂತೆಯೇ ದೂರದ ಒಂದು ಗುಡಿಸಲಿನಿಂದ ಪುಟ್ಟ ಕಂದಮ್ಮಗಳ ಅಳು ಕೇಳಿ ಬರುತ್ತಿದೆ. ಗುಡಿಸಲಿಗೆ ಹತ್ತಿರವಾದಂತೆ ಅಳು ಇನ್ನಷ್ಟು ಜೋರಾಗಿ ಕೇಳಿ ಬಂತು. ಹತ್ತಿರ ಧಾವಿಸಿ ನೋಡಿದಾಗ ಹೆಂಗಸೊಬ್ಬಳು ತನ್ನ ಮಕ್ಕಳನ್ನು ಸುತ್ತಲೂ ಕೂರಿಸಿ, ಒಲೆಯಲ್ಲಿಟ್ಟ ಪಾತ್ರೆಗೆ ಸೌಟು ಹಿಡಿದು ಕೈಯಾಡಿಸುತ್ತಿದ್ದಾಳೆ. ಒಲೆಯ ಮೇಲಿನ ಪಾತ್ರದಲ್ಲಿನ ನೀರು ಕೊತಕೊತನೆ ಕುದಿಯುತ್ತಿತ್ತು. ಆಹಾರವೇನೋ ಅಂದುಕೊಂಡ ಉಮರ್, ಸೂಕ್ಷವಾಗಿ ನೋಡಿದಾಗ ಆದೃಶ್ಯವನ್ನು ನಂಬಲಾಗದೆ ಹೋದರು. ಹೌದು, ಬರೀ ಕಲ್ಲುಗಳು ಅವು.! ಕುದಿಯುವ ನೀರಿನಲ್ಲಿ ಅತ್ತಿಂದಿತ್ತ ಹೊರಳಾಡುತ್ತಿವೆ. ಮಕ್ಕಳ ರೋದನ ಮುಗಿಲು ಮುಟ್ಟುವಂತಿತ್ತು. ಇನ್ನೇನು ನಮಗೆಲ್ಲರಿಗೂ ಅಮ್ಮ ಉಣಬಡಿಸುವಳೆಂಬ ನಿರೀಕ್ಷೆ ಮಾತ್ರ ಕಣ್ಣೀರಿನಲ್ಲಿ ತೋಯ್ದ ಆ ಮುದ್ದು ಕಣ್ಣುಗಳಲ್ಲಿ. ಉಮರ್ ಮೂಕ ವಿಸ್ಮಿತರಾದರು. ತಕ್ಷಣ ಗುಡಿಸಲೊಳಗೆ ಹೋದರು. ಮಹಿಳೆಯನ್ನು ಯಾಕೆ ಈ ರೀತಿ ಮಾಡುತ್ತಿದ್ದೀರಿ ಅಂತ ವಿಚಾರಿಸಿದರು. ಆಗ " ಮಕ್ಕಳು ಹಸಿವಿನಿಂದ ಅಳುತ್ತಿದ್ದಾರೆ. ನನ್ನ ಬಳಿಯೋ ಆಹಾರ ತಯಾರಿಸಲು ಒಂದು ಕಾಳು ಧಾನ್ಯವೂ ಇಲ್ಲ. ಹಾಗಾಗಿ, ಅವರು ಅಳುತ್ತಲೇ ನಿದ್ದೆಗೆ ಜಾರುವ ತನಕ ಆಹಾರ ಬೇಯಿಸುವಂತೆ ಒಲೆಯಲ್ಲಿ ಕಲ್ಲುಗಳನ್ನು ಹಾಕಿ ಕೈಯಾಡಿಸುವಂತೆ ಮಾಡುತ್ತಿರುತ್ತೇನೆ. ನನ್ನ ಮಕ್ಕಳನ್ನು ಸಮಾಧಾನ ಪಡಿಸಲು ಬೇರೆ ದಾರಿಯಿರಲಿಲ್ಲ ಎಂದು ಆ ಮಹಿಳೆ ಹೇಳಿದಾಗ, ಅವರನ್ನು ಸಾಂತ್ವನ ಪಡಿಸಿ, ಅಸ್ಲಮ್ ಅವರನ್ನು ಕರೆದುಕೊಂಡು ನೇರ ಬೈತುಲ್ ಮಾಲ್ ನಿಂದ ಆಹಾರಕ್ಕೆ ಬೇಕಾದ ಸಾಮಗ್ರಿಗಳನ್ನು ಹೊತ್ತು ತರುತ್ತಾರೆ. ನಂತರ ಖಲೀಫ ಉಮರ್ ತನ್ನ ಕೈಯಾರೆ ಅವರಿಗೆ ರೊಟ್ಟಿ ತಯಾರಿಸಿ ಉಣಬಡಿಸುತ್ತಾರೆ. ಆ ಮಹಿಳೆ ಹಾಗೂ ಮಕ್ಕಳು ಸಂತೃಪ್ತರು ಎಂದೆನಿಸಿದಾಗಲೇ, ಮರುದಿನ ಖಲೀಫರ ಸನ್ನಿಧಿಗೆ ಬಂದು ತಮ್ಮ ಬೇಡಿಕೆಗಳನ್ನು ತಿಳಿಸಿ ಎನ್ನುತ್ತಾ ಖಲೀಫ ಉಮರ್ ಅಲ್ಲಿಂದ ಹೊರಡುವುದು. ಆ ಮಹಿಳೆ ಮರುದಿನ ಖಲೀಫರ ಸನ್ನಿಧಿಗೆ ತಲುಪುವ ವರೆಗೂ ನಿನ್ನೆಯ ರಾತ್ರಿ ನಮಗೆ ಆಹಾರ ನೀಡಿದ್ದು ಹಝ್ರತ್ ಉಮರ್ ಅವರೆಂದು ತಿಳಿದಿರಲಿಲ್ಲ.
*******************************************************************************
ಕಾಮೆಂಟ್‌ಗಳು