ನಿಝಾಮ್ ಅನ್ಸಾರಿ ಕಲ್ಲಡ್ಕ
ಆಡು ಜೀವಿದಂ ಎಂಬ ಮಲಯಾಳಂ ಕಾದಂಬರಿಯನ್ನು ಬರೆದವರು ಮಲಯಾಳಂ ನ ಖ್ಯಾತ ಲೇಖಕ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೆನ್ಯಾಮೀನ್. ಇದು ಇಂಗ್ಲಿಷ್, ಅರೆಬಿಕ್, ಕನ್ನಡ, ತಮಿಳು, ಹಿಂದಿ ಭಾಷೆಗಳಿಗೆ ಅನುವಾದಗೊಂಡಿದೆ, ನಜೀಬ್ ಎಂಬವರ ಗಲ್ಫ್ ಜೀವನದಲ್ಲಿ ಉಂಟಾದ ನೈಜ ಘಟನೆಗಳನ್ನಾಧರಿಸಿ ಈ ಕಾದಂಬರಿಯನ್ನು ಬರೆಯಲಾಗಿದೆ. ಆಡು ಜೀವಿತಂ’ ಎಂಬ ಮಲಯಾಳಂ ಕಾದಂಬರಿಯನ್ನು ನುರಿತ ಅನುವಾದಕರಾದ ಡಾ. ಅಶೋಕ್ ಕುಮಾರ್ ರವರು ‘ಆಡುಜೀವನ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಇದರ ಅರೆಬಿಕ್ ಅನುವಾದದ ಪ್ರಸಾರಕ್ಕೆ ಸೌದಿ ಸರ್ಕಾರ ನಿಷೇಧ ಹೇರಿತ್ತು. ಅದು, ಪ್ರಾಚೀನ ಅರಬರು ಕೂಲಿಯಾಳುಗಳ ಮೇಲೆ ಎಸಗುತ್ತಿದ್ದ ಕ್ರೂರತೆಗಳನ್ನು ನಜೀಬ್ ನ ಕಥೆಯ ಮೂಲಕ ಎಳೆಎಳೆಯಾಗಿ ಬಿಡಿಸಿ ಹೇಳಿದುದಕ್ಕೋ ಗೊತ್ತಿಲ್ಲ. ಅಂತೂ, ಕಳೆದ ಎರಡು ವರ್ಷಗಳ ಹಿಂದೆ, ಇದರ ಮೂಲ ಮಲಯಾಳಂ ,ಹಾಗೂ ಅನುವಾದ ಕನ್ನಡ ಎರಡೂ ಭಾಷೆಯಲ್ಲೂ ಓದುವ ಭಾಗ್ಯ ನನ್ನದಾಯಿತು.
ಯಾಕೆ ಈ ನೆನಪು ಈಗ ಮರುಕಳಿಸಿತೆಂದು ಕೇಳಿದರೆ, ಆಡು ಜೀವಿದಂ ಮುಂದಿನ ವರ್ಷಗಳಲ್ಲಿ ಸಿನಿಮಾ ಆಗಿ ತೆರೆಕಾಣಲಿದೆ. ಮಲಯಾಳಂ ನಟ ಪೃಥ್ವಿರಾಜ್ ನಜೀಬನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಅಂದ ಹಾಗೆ, ಲಾಕ್ ಡೌನ್ ಗೂ ಮುನ್ನ ಸಿನಿಮಾ ಚಿತ್ರೀಕರಣ ತಂಡವು, ಜೋರ್ಡಾನ್ ನ ಮರುಭೂಮಿಗೆ ಚಿತ್ರೀಕರಣಕ್ಕಾಗಿ ತೆರಳಿತ್ತು. ಶೂಟ್ ಮುಗಿಸಿ ಹಿಂತಿರುಗಬೇಕೆನ್ನುವಷ್ಟರಲ್ಲಿ ಲಾಕ್ ಡೌನ್ ಘೋಷಣೆಯಾಗಿ, ವಿಮಾನಯಾನ ಸ್ಥಗಿತಗೊಂಡಾಗಿತ್ತು. ಹಾಗೇ, ಕಳೆದ ಒಂದು ವಾರದ ಹಿಂದೆ ತಂಡ ಕೇರಳಕ್ಕೆ ಬಂದಿಳಿದ ಸುದ್ದಿ ಮಾಧ್ಯಮಗಳು ವರದಿಮಾಡಿದ್ದವು. ಆಡು ಜೀವನದಲ್ಲಿ ನಜೀಬ್ ಯಾರಾಗಿದ್ದರು ಎಂಬುದನ್ನು ವಿವರಿಸಲು ವಿ,ಕ ಪತ್ರಿಕೆಯ ಕೃತಿ ವಿಮರ್ಶೆಯ ಭಾಗವನ್ನು ಇಲ್ಲಿ ಅಂಟಿಸುತ್ತಿದ್ದೇನೆ,
'ಆಡು ಜೀವನ' ದ ನಾಯಕ ನಜೀಬ್ (ಈತ ಈಗಲೂ ಇದ್ದಾನೆ ಎನ್ನಲಾಗಿದೆ). ಊರಿನ ನದಿಯಲ್ಲಿ ಮರಳು ಸಂಗ್ರಹಿಸಿ ಬದುಕನ್ನು ಸಾಗಿಸುತ್ತಿದ್ದವ, ಜೀವನ ನಿರ್ವಹಣೆ ಅಸಾಧ್ಯವೆನಿಸಿದಾಗ ನಜೀಬನೂ ಗಲ್ಫ್ ಬದುಕಿನ ಕನಸು ಕಂಡು, ಹೇಗೋ ವೀಸಾ ಸಂಪಾದಿಸಿ ಅಲ್ಲಿಗೆ ಹೋಗುತ್ತಾನೆ. ಅಲ್ಲಿ ಅವನ ಪಾಲಿಗೆ ಸಿಗುವ ಅರ್ಬಾಬ್ (ಮಾಲೀಕ)ನಿಗೆ ಒಂದು ದೊಡ್ಡ ಮಝಾರ (ಅಡು ಸಾಕಣೆ ಕೇಂದ್ರ)ವಿರುತ್ತದೆ. ಈ ಆಡುಗಳನ್ನು ನೋಡಿಕೊಳ್ಳುವುದು ನಜೀಬನಿಗೆ ದಕ್ಕಿದ ಕೆಲಸ. ಅರ್ಬಾಬ್ ಸದಾ ಗಂಭೀರವದನ. ನಜೀಬನಿಗೆ ಗೊತ್ತಿರುವುದು ಮಲಯಾಳಂ ಮಾತ್ರ. ಮರಳುಗಾಡು, ಅರಿಯದ ಭಾಷೆ, ಕ್ರೂರಿ ಅರ್ಬಾಬ್.... ಇಂಥ ಪರಿಸ್ಥಿತಿಯಲ್ಲಿ ನಜೀಬನ ಬದುಕು ಸಾಗುತ್ತದೆ. ಮಾಲೀಕ ಹೇಳಿದ ಕೆಲಸ ಅರ್ಥವಾಗುವುದಿಲ್ಲ. ಆಗ ಅವನ ಸೊಂಟಕ್ಕೆ ಸುತ್ತಿದ ಬೆಲ್ಟು ಬಿಚ್ಚಿಕೊಳ್ಳುತ್ತದೆ. ಅದನ್ನೆತ್ತಿ ನಜೀಬನನ್ನು ಹಿಗ್ಗಾಮುಗ್ಗಾ ಥಳಿಸುತ್ತಾನೆ. ಆಡು ಸಾಕಣೆ ಕೇಂದ್ರದಲ್ಲಿ ಸಾಕಷ್ಟು ನೀರು ತಂದು ಸುರಿಯುತ್ತಾರೆ, ಟ್ಯಾಂಕರಿನಲ್ಲಿ. ಆದರೆ ಅದನ್ನು ನಜೀಬ ಮುಟ್ಟುವಂತಿಲ್ಲ. ಕುಡಿಯುವುದಕ್ಕೆ ಆಡಿನ ಹಾಲು ಸಿಗುತ್ತದೆ, ನೀರು ಸಿಗದು. ಕಕ್ಕಸಿಗೆ ಹೋದರೆ ಅಂಡು ತೊಳೆಯುವಂತಿಲ್ಲ, ಸ್ನಾನದ ಮಾತಂತೂ ಇಲ್ಲವೇ ಇಲ್ಲ. ಊರಿನ ನದಿಯ ದಡದಲ್ಲಿ ಆಟವಾಡಿ, ನೀರಿನಲ್ಲೇ ಚೆಲ್ಲಾಟವಾಡಿದ ನಜೀಬನಿಗೆ ಇಲ್ಲಿ ಯ ಾವುದಕ್ಕೂ ನೀರಿಲ್ಲ. ಆಕಸ್ಮಿಕವಾಗಿ ನೀರು ಬಳಸಿದರೆ ಅರ್ಬಾಬ್ನ ಕೈಗೆ ಮತ್ತೆ ಬೆಲ್ಟು ಬರುತ್ತದೆ. ಇಡೀ ಮರುಭೂಮಿಯಲ್ಲಿ ಮಸರಗಳದ್ದೇ ಕಾರುಬಾರು. ಆದರೆ ಒಂದು ಮಸರದಿಂದ ಮತ್ತೊಂದು ಮಸರಕ್ಕೆ ಯಾವುದೇ ಸಂಪರ್ಕವಿಲ್ಲ.
ಪ್ರತೀ ಹೆಜ್ಜೆಯೂ ಓದುಗನ ಮೈಮನಸ್ಸನ್ನು ರೋಮಾಂಚನಗೊಳಿಸುವ ‘ಆಡುಜೀವನ’ ಅರಬಿಗಳ ಕೌರ್ಯವನ್ನು ನೀರಿನ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ. ಕ್ರೂರ ಪ್ರಾಣಿಗಳಿಗಿಂತಲೂ ಕ್ರೌರ್ಯ ಅರ್ಬಾಬ್ನಲ್ಲಿ ಕಾಣುತ್ತೇವೆ. ಆಡುಗಳೊಂದಿಗೆ ಬೆಳೆಯುತ್ತಾ ನಜೀಬನೂ ಒಂದು ಆಡಾಗಿ ರೂಪಾಂತರಗೊಳ್ಳುತ್ತಾನೆ. ತನ್ನ ಊರಿನ ಅನೇಕರ ಹೆಸರನ್ನು ಆಡುಗಳಿಗಿಟ್ಟು ಸಂತೋಷಪಡುತ್ತಾನೆ. ಆದರೆ ಯಾರಿಗೂ ಯಾವುದಕ್ಕೂ ಹೆದರದ ಅರ್‌ಬಾಬ್ ಮರುಭೂಮಿಯಲ್ಲಿ ಸುರಿಯುವ ಮಳೆಗೆ ಭಯಭೀತನಾಗುತ್ತಾನೆ. ಈ ಅರ್ಬಾಬ್‌ನಿಂದ ತಪ್ಪಿಸಿಕೊಳ್ಳಲು ನಜೀಬ್ ಒಂದೆರಡು ಸಲ ವಿಫಲಯತ್ನ ನಡೆಸುತ್ತಾನೆ. ಕೊನೆಗೂ ಅಲ್ಲಿಂದ ತಪ್ಪಿಸಿಕೊಳ್ಳುವ ಶುಭದಿನ ಬರುತ್ತದೆ. ಪಕ್ಕದ ಮಸರದ ಹಕೀಂ ಹಾಗೂ ಸೋಮಾಲಿಯಾದ ಇಬ್ರಾಹಿಂ ಖಾದಿರ್ ನಜೀಬನಿಗೆ ಜೊತೆಯಾಗುತ್ತಾರೆ. ಅಲ್ಲಿಂದ ಮುಂದೆ ಮರುಭೂಮಿಯ ಭೀಕರ ಪರಿಚಯವಾಗುತ್ತದೆ. ಮರುಭೂಮಿಯ ಓಟದ ನಡುವೆ ನಡೆಯುವ ಘಟನೆಗಳು, ಅನುಭವಗಳು ಓದುಗನು ಉಸಿರು ಬಿಗಿ ಹಿಡಿಯುವಂತೆ ಮಾಡುತ್ತವೆ. ನಡುವೆ ಹಕೀಂ ನೀರಿಗಾಗಿ ಹಂಬಲಿಸಿ ರಕ್ತಕಾರಿ ಅಸುನೀಗುತ್ತಾನೆ. ಹಿರಿಯನಾದ ಇಬ್ರಾಹಿಂ ಖಾದಿರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾನೆ. ನಜೀಬ್ ಒಬ್ಬನೇ ನಡೆಯುತ್ತಲೂ ಓಡುತ್ತಲೂ ಹೈವೇಯನ್ನು ತಲುಪುತ್ತಾನೆ. ಸಂಭಾವಿತ ಅರಬಿಯೊಬ್ಬ ತನ್ನ ಕಾರಿನಲ್ಲಿ ನಜೀಬನನ್ನು ಬತ ಪಟ್ಟಣದಲ್ಲಿ ಇಳಿಸುತ್ತಾನೆ. ಅಲ್ಲಿರುವ ಕೇರಳದ ಕುಂಕಜಿಕ್ಕನೆಂಬ ಹೊಟೇಲ್ ಮಾಲಿಕ ನಜೀಬನಿಗೆ ದೇವರಂತೆ ಕಾಣುತ್ತಾನೆ. ನಜೀಬನ ಆವರೆಗಿನ ಬದುಕಿಗೆ ಕುಂಜಿಕ್ಕ ಮಂಗಳ ಹಾಡಿ, ಅವನನ್ನು ಕೇರಳಕ್ಕೆ ಕಳುಹಿಸುವ ಏರ್ಪಾಡು ಮಾಡುತ್ತಾನೆ.
‘ಆಡು ಜೀವನ’ದಲ್ಲಿ ಗಲ್ಭ್ ಬದುಕಿನ, ಮರುಭೂಮಿಯ ದಟ್ಟ ಚಿತ್ರಣವಿದೆ. ಓದುಗನನ್ನು ಬೇರೊಂದು ಗ್ರಹಕ್ಕೆ ಕರೆದುಕೊಂಡು ಹೋಗುವಂತಹ ವಿವರಣೆಯಿದೆ. ಕನ್ನಡದಲ್ಲಿ ಖಂಡಿತವಾಗಿಯೂ ಮರುಭೂಮಿಯ ಬದುಕಿನ ಕತೆ ಹೇಳುವ ಪುಸ್ತಕ ಬಂದಿರಲಾರದು. ಈ ಜಗತ್ತಿನಲ್ಲಿ ಎಲ್ಲರಿಗೂ ಕಷ್ಟಗಳಿರುತ್ತವೆ. ‘ಆಡು ಜೀವನ’ದ ನಜೀಬನ ಅನುಭವಗಳನ್ನು ಓದಿದಾಗ ನಮ್ಮದು ಕಷ್ಟಗಳಾಗಿ ಉಳಿಯುವುದಿಲ್ಲ. ಬದಲಿಗೆ ಮನಸ್ಸು ಹಗುರಗೊಳ್ಳುತ್ತದೆ. ಡಾ. ಅಶೋಕ್‌ಕುಮಾರ್‌ರವರ ಅನುವಾದ ಸರಾಗವಾಗಿ ಓದಿಸಿಕೊಂಡು ಹೋಗುವಂತಿದೆ. ಅವರ ಆಯ್ಕೆಯನ್ನು ಪ್ರಶಂಸಿಸಲೇ ಬೇಕಾಗಿದೆ. ಆದರೆ ಈ ಅನುವಾದದಲ್ಲಿ ಬಹಳಷ್ಟು ಮಲಯಾಳಂ ಶಬ್ದಗಳು ಬಳಕೆಯಾಗಿವೆ. ಅವುಗಳ ಅರ್ಥವನ್ನು ಕೊನೆಯ ಪುಟದಲ್ಲಿ ಕೊಡಲಾಗಿದೆ. ಆದರೆ ಇದನ್ನು ಆಯಾ ಪುಟದಲ್ಲೇ ಕೊಟ್ಟಿದ್ದಿದ್ದರೆ ಓದುಗನ ಓದಿನ ಓಟ ಮತ್ತಷ್ಟು ಚುರುಕಾಗುತ್ತಿತ್ತು. ಪಡಚ್ಚೋನೇ, ಪಡೆದವನೇ, ಅಲ್ಲಾಹ್, ದೇವರೇ ಎಂಬ ಒಂದೇ ಅರ್ಥದ ಹಲವು ಶಬ್ದಗಳನ್ನು ಅಶೋಕ್‌ಕುಮಾರ್ ಇಲ್ಲಿ ಬಳಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ‘ಆಡು ಜೀವನ’ ಕನ್ನಡಕ್ಕೆ ಅಶೋಕ್ ಅವರು ನೀಡಿರುವ ಅತ್ಯುತ್ತಮ ಅನುವಾದ ಕೃತಿ. ಇದಕ್ಕೆ ಎಸ್ ಎಂ ಪೆಜತ್ತಾಯ ಅವರ ಒಳ್ಳೆಯ ಮುನ್ನುಡಿಯೂ ಇದೆ.
*********************************************************************************************
ಕಾಮೆಂಟ್‌ಗಳು