ಶಿವರಾಮ ಕಾರಂತರ 'ಬತ್ತದ ತೊರೆ' ೧೯೫೩ ರಲ್ಲಿ ಮೂಡಿಬಂದ ಕೃತಿ. ಕನ್ನಡ ಸಾಹಿತ್ಯಕ್ಕೆ ಕಾರಂತರ ಕೊಡುಗೆ ಅಪಾರವಾದುದೆಂಬುವುದರಲ್ಲಿ ಎರಡು ಮಾತಿಲ್ಲ. ಕಡಲ ತೀರದ ಭಾರ್ಗವರೆಂದು ಖ್ಯಾತನಾಮರಾದ ಕಾರಂತರು ತಮ್ಮ ೫೦ ನೇಯ ವಯಸ್ಸಿನ ಆಸುಪಾಸಿನಲ್ಲಿ ಬರೆದ ಕೃತಿಯಿದು. ಅವರ ಸಮಕಾಲೀನರಾಗಿ ಹಲವು ಕಾದಂಬರಿಕಾರರು ಇದ್ದರೂ ಕೂಡಾ, ಅವರ ಕಾದಂಬರಿ ಪ್ರಕಾರದ ಸಾಧ್ಯತೆಗಳ ಅನಾವರಣ, ಅವುಗಳಲ್ಲಿನ ಹೊಸ ಪ್ರಯೋಗಗಳು ಇವುಗಳೆಲ್ಲಾ ಉಳಿದವರಿಗಿಂತಲೂ ಕಾರಂತರನ್ನು ಶ್ರೇಷ್ಠರನ್ನಾಗಿಸುತ್ತದೆ. ಇನ್ನು ಬತ್ತದ ತೊರೆ ಕಾದಂಬರಿಯಲ್ಲಿ ಐವರು ತರುಣಿಯರ ವಾಸ್ತವಿಕ ಜೀವನವನ್ನು ಮೂಲವಸ್ತುವನ್ನಾಗಿಸಿಕೊಂಡು ಮಂಜುಳೆ, ವಿನತೆ, ಅಂಜಲಿ ಈ ಮೂರು ಸ್ತ್ರೀ ಪಾತ್ರಗಳ ಮೂಲಕ ಚಿತ್ರಿಸಿದ್ದಾರೆ. ಸಹಜ ಪ್ರೇಮದಿಂದ ನಿರಾಶೆಗೊಂಡು ಮದುವೆ ಹುಳಿಯೆಂದು ತಿಳಿದವಳೊಬ್ಬಳಾದರೆ, ಮದುವೆ ಎಂಬುದು ಮೂರ್ಖತನ ಅಂದುಕೊಂಡೇ, ಜೀವನದ ಭಧ್ರತೆಗಾಗಿ ಮದುವೆಯಾದವಳೊಬ್ಬಳು, ತಾಯ್ತನವನ್ನು ಅದುಮಿ ಹಿಡಿದು ಕಣ್ಣೀರು ಕರೆದವಳೊಬ್ಬಳು, ವೇಶ್ಯೆಯಾಗಿ ಹುಟ್ಟಿ, ಮರ್ಯಾದಸ್ಥ ಬಾಳಿಗಾಗಿ ಊರು ಬಿಟ್ಟು ಓಡಿ ಹೋದವಳು, ಕಾದು ಕಾದು ಅಲೆದಾಡಿ, ಮದುವೆಯಾಗಿ ಗಂಡನನ್ನು ನಂಬಿ, ಅವನ ಸೆರೆಗೆ ಸಿಲುಕಿ ತಪ್ಪೇನೂ ಮಾಡದಿದ್ದರೂ, ತಾನು ಜಾರೆಯೆಂದು ಬರೆದು ಕೊಟ್ಟ ಸಹನಾಮಯಿಯೊಬ್ಬಳು, ಹೀಗೇ ಐವರು ಸ್ತ್ರೀಯರ ಜೀವನ ಇಲ್ಲಿ ಕಾದಂಬರಿಯಾಗಿದೆ. ಇಲ್ಲಿನ ಕೆಲವೊಂದು ಸನ್ನಿವೇಶಗಳು ಊಹೆಗೂ ಮೀರಿದ ಸತ್ಯಗಳಾಗಿವೆ ಎನ್ನುತ್ತಾರೆ ಕಾರಂತರು.
ಪ್ರಸ್ತುತ ಕಾದಂಬರಿಯಲ್ಲಿ, ಬಹಳ ಮುಖ್ಯವಾಗಿ ಓದುವ ಕಾಡುವ ಕೆಲವೊಂದು ಘಟನೆಗಳೆಂದರೆ, ಒಂದು ವಿನುತ ತನ್ನ ಗಂಡನಿಂದ ಅನುಭವಿಸಬೇಕಾಗಿ ಬರುವ ಕಷ್ಟಗಳು, ವಿನುತ ಒಬ್ಬಳು ವೇಶ್ಯೆ ಸಂತತಿಯಾಗಿದ್ದರೂ ಕೂಡಾ, ಅವಳು ಅದರಿಂದ ಪಾರಾಗಲೆಂದೇ ಮನೆ ಬಿಟ್ಟು ಮುಂಬಯಿಗೆ ಬರುತ್ತಾಳೆ. ಅಲ್ಲಿ ಸಂಬಂಧಿಕರ ಮನೆಯಲ್ಲೇ ಉಳಿದು ಹೊರಗಡೆ ಚಾಕರಿಗೆ ಹೋಗುತ್ತಾಳೆ. ನಂತರ ಅವಳ ಮನೆಯಂತೆಯೇ, ಆ ಮನೆಯಲ್ಲೂ ಇವಳ ಬಗ್ಗೆ ಸಂದೇಹ ಪಟ್ಟು ಏನೇನೋ ಮಾತನಾಡಲಾರಂಭಿಸಿದಾಗ, ಹೊರಗಡೆ ಒಂದು ಬಾಡಿಗೆ ರೂಮೊಂದರಲ್ಲಿ, ತನ್ನ ಜೊತೆ ಆಫೀಸು ಕೆಲಸದಲ್ಲಿದ್ದವರೊಡನೆ ಉಳಿಯುವ ನಿರ್ಧಾರ ಮಾಡುತ್ತಾಳೆ. ಯಾವಾಗ, ವಿವಾಹಿತನೊಬ್ಬನಿಂದ ಅವಳಿಗೆ ಗಂಟು ಹಾಕಿಸುತ್ತಾರೋ ಅಂದಿನಿಂದ ಅವಳು ಕಷ್ಟಗಳನ್ನು ಕೈ ಬೀಸಿ ಕರೆದಂತಾಯಿತು. ಮುಂದೆ ದುಃಖ, ಸಂಕಷ್ಟ, ಅವಮಾನಗಳ ಬದುಕು.
ವಿನುತ ಸಹನಾಮಯಿ ಅಲ್ಲದೇ ಹೋಗಿದ್ದರೆ, ಅವಳೆಂದೋ ಅವನನ್ನು ಬಿಟ್ಟು ಓಡಿ ಹೋಗಬೇಕಿತ್ತು. ಆದರೆ, ಅವಳ ಮಕ್ಕಳಲ್ಲದ ಮಕ್ಕಳನ್ನು(ವಿವಾಹಿತ ಗಂಡನ ಮಾಜಿ ಪತ್ನಿಯ ಎರಡು ಮಕ್ಕಳ ಜವಾಬ್ದಾರಿ ವಿನುತಳ ಮೇಲಿತ್ತು) ಸಾಕುವ ನೆನಪಿನಲ್ಲಾದರೂ, ಜೊತೆಗೆ ತನ್ನೆರೆಡು ಮಕ್ಕಳೂ ಇರುವುದರಿಂದ ಅವರನ್ನು ನೆನೆದು ಮೌನಿಯಾದಳು. ತಾನು ಜಾರೆಯೆಂದೂ, ತನ್ನ ನಾಲ್ಕು ಮಕ್ಕಳು ಜಾರೆಯಾದ ತನಗೆ ಹುಟ್ಟಿದವು ಎಂದೂ ಲಿಖಿತ ಸಾಕ್ಷಿ ಬರೆದು ರುಜು ಹಾಕಲು ಒತ್ತಾಯ ಮಾಡಿದನು. ಹಿಂಜರಿದಾಗ, ಆತ್ಮಹತ್ಯೆಗೈಯುವದಾಗಿ ಬೆದರಿಕೆ ಹಾಕಿದನು. ಕೊನೆಗೆ ಅದಕ್ಕೂ ಶರಣಾಗುತ್ತಾಳೆ. ಇದು ಎಲ್ಲಿಯವರೆಗೆ ಮುಂದುವರಿಯುತ್ತೆ ಎಂದರೆ, ವಿನುತಳ ಗಂಡ ಅಪಘಾತವೊಂದರಲ್ಲಿ ಕಾಲು ಮುರಿದು ಮನೆ ಸೇರುವವರೆಗೂ, ಅಲ್ಲ ಆನಂತರವೂ ಮುಂದುವರಿದಿತ್ತು ಅವನ ಪ್ರಾಣ ಪಕ್ಷಿ ಹಾರಿ ಹೋಗುವವರೆಗೂ.. ಅದುವರೆಗೂ ಏನೂ ಮಾತನಾಡದೆ ಅವನ ಚಾಕರಿ ಮಾಡಿದಳು ವಿನುತಾ...
ಕಾಡುವ ಇನ್ನೊಂದು ಪಾತ್ರ ಮನೋಹರನದ್ದೇ.. ಮನೋಹರ ಸಂಪ್ರದಾಯಸ್ಥ ಕುಟುಂಬದಿಮದ ಬಂದವನು. ಒಳ್ಳೆಯ ವಿದ್ಯಾವಂತ, ನಾಟಕಾಸಕ್ತಿಯುಳ್ಳವನೂ ಹೌದು..ಇಲ್ಲಿ ಬರುವ ಮುಂಜುಳ, ವಿನುತರಂತಹ ಎಲ್ಲ ಮುಖ್ಯ ಪಾತ್ರಗಳೂ ಕಲಿತ ಶಾಲೆಯಲ್ಲೇ ಅವನೂ ಕಲಿತದ್ದು. ಮಂಜುಳಾ ಅಂದರೆ ಅವನಿಗೆ ಬಹಳ ಪ್ರೀತಿ. ಮಂಜುಳಳಿಗೂ ಅತ್ತ ಒಲವಿತ್ತು. ಚುಟುಕಾಗಿ ಹೇಳಬೇಕೆಂದರೆ, ಇಬ್ಬರೂ ಶಾಲಾ ಶಿಕ್ಷಣದ ನಂತರ, ಮಂಗಳೂರಿಗೆ ಹೋಗುತ್ತಾರೆ. ಅಲ್ಲಿ ಒಂದೇ ಕಾಲೇಜಿನಲ್ಲಿ ಕಲಿಕೆ. ಆನಂತರ ಮನೋಹರ ನಟನೆಯ ಹುಚ್ಚು ತಲೆಗೆ ಹತ್ತಿದ್ದರಿಂದ ಮುಂಬಯಿಗೆ..ಮಂಜುಳಾ ದಾರಿ ಕಾಯುತ್ತಾ ಕುಳಿತವಳು ಕೊನೆಗೆ ಮನೆ ಬಿಟ್ಟು ಓಡಿ ಹೋಗುತ್ತಾಳೆ. ಅದೇ ಮುಂಬಯಿಗೆ.. ವರ್ಷಗಳ ಕಾಲ ಇಬ್ಬರೂ ಭೇಟಿಯೋ, ಪತ್ರವೋ ಯಾವುದೂ ಇಲ್ಲ. ಮನೋಹರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ, ಅವನ ಬಾಳು ಧೂಳೀಪಟವಾಗುತ್ತದೆ. ದಾರಿದ್ರ್ಯ ಕಷ್ಟ ಕೋಟಲೆಗಳು ಅವನನ್ನು ಬೆನ್ನುಬಿಡದೆ ಹಿಂಬಾಲಿಸುತ್ತದೆ. ಕೊನೆಗೆ ಮಂಜುಳಾ ಭೇಟಿಯಾಗುವಾಗ ಕಾದಂಬರಿ ಅಂತಿಮ ಘಟ್ಟಕ್ಕೆ ತಲುಪಿರುತ್ತದೆ. ಮನೋಹರ ಕ್ಷಯ ರೋಗದಿಂದ ಸಾವನ್ನು ಎದುರುನೋಡುತ್ತಿರುವಾಗ ಮಂಜುಳಾ ಸಹಾಯಕ್ಕಾಗಿ ನಿಲ್ಲೋದು, ಅವಳಲ್ಲಿಗೆ ತಲುಪೋದು, ವಿನುತ ಮತ್ತು ಮಂಜುಳಾ ಒಂದಾಗುವುದು ಎಲ್ಲವೂ ಕಥೆಯ ಗುಟ್ಟು.
ಇಲ್ಲಿ ಕೆಲವೊಂದು ತುರ್ತು ನಿರ್ಧಾರಗಳಿಂದಾಗಿ ಭವಿಷ್ಯದಲ್ಲಿ ಸಮಸ್ಯೆಗಳನ್ನೆದುರಿಸುವ, ಅಥವಾ ಆಸೆ, ವ್ಯಾಮೋಹ, ಕಾಮ ಇತ್ಯಾದಿಗಳ ತುಡಿತ ಹೆಚ್ಚಾದ ಯೌವನ ಕಾಲದಲ್ಲಿ ಮನೆಯವರನ್ನು ಬಿಟ್ಟು ಹೋಗಿ, ಸ್ವಚ್ಛಂದ ಹಕ್ಕಿಯಾಗಿ ಹಾರಾಡುವ ಬಯಕೆಗಳೆಲ್ಲವೂ ಮುಂದೆ ದುರಂತ ಚಿತ್ರಣಗಳಾಗಿ ಪರಿಣಮಿಸುವ, ಹಲವರ ಕಣ್ಣೀರ ಕರೆಯುವಂತೆ ಮಾಡುವ ಒಂದು ಅದ್ಭುತ ಕಥೆ , ಪಾತ್ರಗಳ ವ್ಯಥೆ 'ಬತ್ತದ ತೊರೆ'ಯಲ್ಲಡಗಿದೆ.
-ನಿಝಾಮ್ ಅನ್ಸಾರಿ ಕಲ್ಲಡ್ಕ
ಕಾಮೆಂಟ್‌ಗಳು