'ಏರೋಪ್ಲೇನ್ ಚಿಟ್ಟೆ' ಪೂರ್ಣಚಂದ್ರ ತೇಜಸ್ವಿ ಬರೆದ ನಮ್ಮ ಪರಿಸರದ ಜೀವಜಾಲಗಳ ಕುರಿತು ಬರೆದಿರುವ ಕುತೂಹಲಕಾರಿ ಅಂಶಗಳನ್ನೊಳಗೊಂಡ ಕೃತಿ. ನಮ್ಮ ಸುತ್ತಮುತ್ತಲಲ್ಲಿ ಕಂಡು ಬರುವ ಒಂಟಿಹುಳು, ಏರೋಪ್ಲೇನ್ ಚಿಟ್ಟೆ, ಬಾವಲಿ, ಕೀಟ ಶಿಲ್ಪಿಗಳು, ಹಾವು ಮೀನು, ಹಲ್ಲಿ, ಮಲಬಾರ್ ಟ್ರೋಜನ್, ಜೇಡ ಹೀಗೇ ಹಲವು ಜೀವಿಗಳ ಕುರಿತಾದ ವಿಸ್ಮಯ ಪ್ರಪಂಚವನ್ನು ನಮ್ಮ ಮುಂದೆ ತೆರೆದಿಡುತ್ತದೆ.
ಒಂಟಿ ಹುಳು, ಮರದ ಎಲೆಯನ್ನು ಬೀಡಿಯಾಕಾರದಲ್ಲಿ ಸುತ್ತಿ, ಅದರಲ್ಲಿ ಮೊಟ್ಟೆ ಇಟ್ಟು ಭೂಮಿಗೆ ಬಿಸಾಡುವ ಆ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ತೇಜಸ್ವಿಯವರು ಸೂಕ್ಷ್ಮವಾಗಿ ಗಮನಿಸಿ, ಅದರ ಎಲ್ಲಾ ಆಯಾಮಗಳ ಕುರಿತೂ ವಿವರಿಸಿದ್ದಾರೆ.
ಕೃತಿಯ ಶೀರ್ಷಿಕೆಯಂತೆಯೇ ಏರೋಪ್ಲೇನ್ ಚಿಟ್ಟೆಯ ಬಗ್ಗೆಯೂ ಸಾಕಷ್ಟು ಮಾಹಿತಿಗಳಿವೆ. ಅವೆಲ್ಲವುಗಳಿಗಿಂತಲೂ ನನಗೆ ಬಹಳ ಅಚ್ಚರಿ ಮೂಡಿಸಿದುದೆಂದರೆ ಬಾವಲಿ ಎಂಬ ಜೀವಿಯ ಅದ್ಭುತ ಜಗತ್ತು.. ಬಾವಲಿಯ ಬಗ್ಗೆ ಅವರು ಬಾಕಿಯುಳಿಸಿದ ವಿಷಯಗಳೇ ಇಲ್ಲವೆಂದು ಅನಿಸುವಷ್ಟರ ಮಟ್ಟಿಗೆ, ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು, ಪ್ರಾಣಿಶಾಸ್ತ್ರ ಪರಿಣತರು ಬಾವಲಿಗಳ ಶ್ರವಣಾತೀತ ಶಬ್ದಗಳನ್ನು ಆಲಿಸುವ ಸಾಮರ್ಥ್ಯವನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿ ಅವರು ಮಾಡಿದಂತಹ ಸಂಶೋಧನೆಗಳು, ಅಧ್ಯಯನಗಳು ಹಂತ ಹಂತವಾಗಿ ತಿಳಿಯುವಾಗ ನಾವೆಲ್ಲಾ ಸಾಮಾನ್ಯವೆಂದೇ ಕಾಣುವ, ಒಂದು ಜೀವಿಯಲ್ಲಿ ಇಷ್ಟೊಂದು ಕೌತುಕ, ಕುತೂಹಲಗಳಿಗೆ ಎಡೆಮಾಡಿಕೊಡುವಂತಹ ವಿಷಯಗಳಿವೆ ಅಂತ ತಿಳಿಯುವಾಗ, ನಿಜಕ್ಕೂ ಆ ವಿಷಯದಲ್ಲಿ ನಾವೆಷ್ಟು ಅಜ್ಞಾನಿಗಳು ಎಂಬುದು ಸ್ಟಷ್ಟವಾಗಿ ಮನವರಿಕೆಯಾಗುತ್ತದೆ. ಆ ಪ್ರಯೋಗಗಳನ್ನು ನಾನು ಹೇಳುತ್ತಾ ಹೋದರೆ, ಪುಟಗಟ್ಟಲೆ ಬರೆಯಬೇಕಾಗಬಹುದು ಎಂಬ ಕಾರಣದಲ್ಲಿ ಆ ಕುತೂಹಲಗಳನ್ನು ಮಾತ್ರ ನಿಮ್ಮೊಂದಿಗೆ ಹಂಚುತ್ತಿದ್ದೇನೆ.
ಅಂತೆಯೇ, ಹಲ್ಲಿ ತನ್ನ ಬಾಲವನ್ನು ತನ್ನ ಪ್ರಾಣರಕ್ಷಣೆಗೆ ಬಳಸುತ್ತದೆಯೋ, ಜೇಡ ಯಾವ ರೀತಿಯಲ್ಲೆಲ್ಲಾ ಬಲೆ ಕಟ್ಟುತ್ತದೆ ಎಂಬುದೆಲ್ಲಾ ಕಣ್ಣರಳಿಸಿ ಓದುವಂತೆ ಮಾಡುತ್ತದೆ. ಅದರಲ್ಲೂ, ಆಮೆ, ಹಾವು ಮೀನು ಮತ್ತು ಅದರ ಅಪಾಯಗಳು, ಅದು ತನಗೆ ತಿಳಿದ ಬಗೆಯನ್ನು ತೇಜಸ್ವಿಯವರು ಕಥೆಯಂತೆ ಹೇಳುತ್ತಾ ಹೋಗೋದು ಈ ಕೃತಿಯನ್ನು ಕಾದಂಬರಿಯಂತಾಗಿಸಿದೆ.
ಒಟ್ಟಿನಲ್ಲಿ, ಲೇಖಕರು ಜೀವವೈವಿಧ್ಯತೆಯ ಮೇಲಿಟ್ಟಿರುವ ಅಪಾರವಾದ ಕಾಳಜಿ, ಪ್ರೀತಿ ಎಲ್ಲವೂ ಇಲ್ಲಿ ಅದರ ಸಂದರ್ಭ ಸಹಿತವಾಗಿ ಓದುಗರಿಗೆ ವಿವರಿಸಿಕೊಟ್ಟಿದ್ದಾರೆ ತೇಜಸ್ವಿಯವರು. ಓದಿನ ಕೊನೆಯಲ್ಲಿ, ನಿಸರ್ಗದ ಜಲಚರ , ಗೋಚರ, ಅಗೋಚರ ಪ್ರಾಣಿಗಳ ಕುರಿತು ಇನ್ನಷ್ಟು ಓದಬೇಕು, ಆ ಮೂಲಕ ಪ್ರಾಣಿ, ಪಕ್ಷಿಗಳ ಭಾಷೆಯನ್ನು ಕಲಿತು, ಅವುಗಳನ್ನು ದೂರವಿಟ್ಟುಕೊಂಡೇ ಬಾಳಲು ಬಿಡಬೇಕು ಎಂಬ ಯೋಚನೆ ಮೂಡುವುದಂತೂ ಖಂಡಿತ...
ನಿಝಾಮ್ ಅನ್ಸಾರಿ ಕಲ್ಲಡ್ಕ
ಕಾಮೆಂಟ್‌ಗಳು