ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಒಕ್ಕೂಟದ (SKJU)ಅಧೀನದಲ್ಲಿ ಕಾರ್ಯಾಚರಿಸುವ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಂಗೀಕೃತ ಮದ್ರಸಗಳ ವಿದ್ಯಾರ್ಥಿಗಳಿಗೆ ನವ ಅಧ್ಯಯನ ವರ್ಷ ಇಂದಿನಿಂದ ಆರಂಭಗೊಂಡಿದೆ. ವಿಶೇಷ ಅಂದ್ರೆ, ಈ ಬಾರಿ ತರಗತಿಗಳ ಪ್ರಾರಂಭೋತ್ಸವದ ಸಂಭ್ರಮಗಳಿಲ್ಲದೆ, ಮದ್ರಸಾ ಕಟ್ಟಡಗಳು ತೆರೆಯದೇ, ಹತ್ತು ಸಾವಿರಕ್ಕೂ ಮಿಕ್ಕ ಮದ್ರಸಗಳ ಹನ್ನೆರಡು ಲಕ್ಷ ವಿದ್ಯಾರ್ಥಿಗಳು ಅವರವರ ಮನೆಗಳಲ್ಲಿಯೇ ಕುಳಿತು ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಎಂಬುದು.
ಆನ್ ಲೈನ್ ತರಗತಿಗಳಿಗಾಗಿ, ಸಮಸ್ತ ಈ ಹಿಂದೆಯೇ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ವಿದ್ಯಾಭ್ಯಾಸ ಬೋರ್ಡ್ ಅದಕ್ಕಾಗಿ ಆರು ಕ್ಯಾಮರಾ ಯುನಿಟ್ ಗಳ ಕ್ಲಾಸ್ ರೂಂಗಳು ,22 ಪರಿಣತರಾದ ಅಧ್ಯಾಪಕರನ್ನು ನೇಮಕಗೊಳಿಸಿದೆ. ತರಗತಿ ಆರಂಭದಿಂದ ಕೊನೆಯವರೆಗೂ ವಿದ್ಯಾರ್ಥಿ ಜೊತೆ ಪೋಷಕರು ಕುಳಿತಿರಬೇಕು.ಹೋಂ ವರ್ಕ್ ನೀಡಿದರೆ, ಅದನ್ನು ಮಾಡಿ, ಮುಂದೆ ಮದ್ರಸಗಳಲ್ಲಿ ತರಗತಿ ಆರಂಭಗೊಳ್ಳುವಾಗ ಮೌಲ್ಯಮಾಪನಕ್ಕಾಗಿ ಅಧ್ಯಾಪಕರಿಗೆ ತೋರಿಸಬೇಕು. ಮನೆಯಲ್ಲಿ ತರಗತಿಯ ವಾತಾವರಣವನ್ನು ಒದಗಿಸಿಕೊಟ್ಟು,ವಿದ್ಯಾರ್ಥಿಗಳಿಗೆ ಮನೆಯವರು ಸಹಕರಿಸಬೇಕು. ಅಲ್ಲದೇ, ಮದ್ರಸಾ ಹಾಗೂ ಜಮಾಅತ್ ಕಮಿಟಿಗಳು ಸೇರಿ, ಆನ್‌ಲೈನ್ ತರಗತಿಗಳು ಆಯಾ ಮದ್ರಸಗಳ ವಿದ್ಯಾರ್ಥಿಗಳಿಗೆ ಅವರವರ ಮನೆಗಳಲ್ಲಿಯೇ ಸುಲಭವಾಗಿ ತಲುಪುವಂತೆ ಎಲ್ಲಾ ರೀತಿಯಲ್ಲಿ ಸಹಕಾರವನ್ನು ನೀಡಬೇಕು. ಮದ್ರಸಗಳು ತೆರೆಯುವ ವರೆಗೆ ಮಾತ್ರ ಆನ್ ಲೈನ್ ತರಗತಿಗಳು ನಡೆಯಲಿದೆ ಎಂದು ಬೋರ್ಡ್ ಹೇಳಿದೆ.
ಶುಕ್ರವಾರ ಅಲ್ಲದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 7:30 ರಿಂದ 8:30 ರ ವರೆಗೆ ಒಂದು ಗಂಟೆಯ ಕಾಲ ತರಗತಿ ನಡೆಯಲಿದೆ. ಒಂದನೆಯ ತರಗತಿಯಿಂದ +2 ತನಕ ಇರುವ ವಿದ್ಯಾರ್ಥಿಗಳಿಗೆ ತರಗತಿಗಳು ಇರಲಿವೆ. ಪ್ರತಿಯೊಂದು ಕ್ಲಾಸ್ ಗಳಿಗೂ ಬೇರೆ ಬೇರೆ ಲಿಂಕ್ ಇರುತ್ತದೆ. ಅವುಗಳನ್ನು ಸಮಸ್ತ ಆನ್ ಲೈನ್ ಎಂಬ ಯೂಟೂಬ್ ಚಾನೆಲ್ ನಿಂದ ಪಡೆಯಬಹುದಾಗಿದೆ.
ಭಾರತದಾಚೆ ಯು.ಎ.ಇ, ಸೌದಿ ಅರೇಬಿಯಾ, ಒಮಾನ್,ಕತಾರ್,ಕುವೈತ್,ಬಹರೈನ್, ಮಲೇಷ್ಯಾ ಗಳಲ್ಲೂ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ನ ಮದ್ರಸಗಳಿವೆ. ಸಮಸ್ತ ಆನ್ ಲೈನ್ ಚಾನಲ್ ನ ಉದ್ಘಾಟನೆಯನ್ನು ಸಯ್ಯಿದ್ ಹೈದರಲಿ ಶಿಹಾಬ್ ತಂಗಳ್ ಪಾಣಕ್ಕಾಡ್ ಅವರು ಇತ್ತೀಚಿಗೆ ನೆರವೇರಿಸಿದ್ದರು.
ಆನ್ ಲೈನ್ ಶಿಕ್ಷಣ ಸುಲಭವೇ..?
ಆನ್ ಲೈನ್ ಶಿಕ್ಷಣ ದ ಬಗ್ಗೆ ಹಲವರಿಗೆ ಗೊಂದಲಗಳು ಸಹಜ. ಏಕೆಂದರೆ, ಕ್ಲಾಸ್ ಕೇಳಲು ಮೊಬೈಲ್,ಟ್ಯಾಬ್, ಲಾಪ್ ಟಾಪ್ ಗಳಂತಹ ಸೂಕ್ತವಾದ ಉಪಕರಣಗಳಿಲ್ಲದೆ ಹೋದರೆ ಅಥವಾ ನೆಟ್ ವರ್ಕ್ ಸಮಸ್ಯೆಗಳು ಇರುವಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಇದು ಕಷ್ಟ ಸಾಧ್ಯ ಅನ್ನುವ ವಿಷಯದಲ್ಲಿ ಎರಡು ಮಾತಿಲ್ಲ. ಹಾಗಂತ ಸಮಸ್ತ ಸಂಪೂರ್ಣವಾಗಿ ಆನ್ಲೈನೀಕರಣ ಮಾಡುವುದಾಗಿಯೂ ಹೇಳಿಲ್ಲ. ಸದ್ಯದ ಮಟ್ಟಿಗೆ ತಿಂಗಳುಗಳ ಕಾಲ ನಮ್ಮ ಮಕ್ಕಳು ಧಾರ್ಮಿಕ ಶಿಕ್ಷಣದಿಂದ ದೂರ ಉಳಿಯದಿರಲಿ ಎಂಬ ಉದ್ದೇಶದಿಂದ ಇದೊಂದು ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಇತ್ತೀಚಿಗೆ ಕೇರಳದ ಸಮೀಕ್ಷೆಯೊಂದು ಹೇಳಿದಂತೆ, ಕೇರಳದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಂಪೂರ್ಣವಾಗಿ ಆನ್ ಲೈನ್ ಶಿಕ್ಷಣ ಜಾರಿಗೆ ತರುವುದಾದರೆ, ರಾಜ್ಯದ ಶೇ.30 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಪಡೆಯಲು ಆಗಲ್ಲ. ಕರ್ನಾಟಕದ ಪರಿಸ್ಥಿತಿಯೂ ಕೂಡಾ ಇದಕ್ಕಿಂತ ಭಿನ್ನವೇನಲ್ಲ. ಅಲ್ಲದೇ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕೂಡಾ, ಇದರಿಂದ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆ ಸಂಪೂರ್ಣವಾಗಿ ಆಗಬೇಕೆಂದಿಲ್ಲ ಎಂದು ಅಲ್ಲಿನ ಸಮೀಕ್ಷೆಗಳು ಹೇಳಿವೆ. ಭಾರತದಂತಹ ದೇಶದಲ್ಲಿ ಈ ಪ್ರಯತ್ನಗಳ ಸಾಧಕ ಬಾಧಕಗಳ ಕುರಿತು ಇನ್ನೂ ಚರ್ಚೆಗಳಾಗಬೇಕಿದೆ. ಅದು ಎಷ್ಟರ ಮಟ್ಟಿಗೆ, ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಚಾನೆಲ್ ಲಿಂಕ್:
-ನಿಝಾಮ್ ಅನ್ಸಾರಿ ಕಲ್ಲಡ್ಕ
ಕಾಮೆಂಟ್‌ಗಳು